ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆಯು ನಮ್ಮ ದೇಶ ಹಿಂದೆಂದೂ ಕಾಣದಂಥ ಹಲವು ಸನ್ನಿವೇಶ ಮತ್ತು ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತಿದೆ.
ಹಲವು ಬೆಳವಣಿಗೆಗಳು, ಚಿತ್ರ ವಿಚಿತ್ರನಡವಳಿಕೆಗಳು, ಮುಖ್ಯಮಂತ್ರಿಯೊಬ್ಬರಿಂದ ಪ್ರಚೋದನಕಾರಿ ಹೇಳಿಕೆಗಳು ಮೊದಲಾದ
ವಿಚಾರಗಳು ಒಂದೆಡೆಯಾದರೆ, ಹಿಂದೆಂದೂ ಆ ರಾಜ್ಯದಲ್ಲಿ ಅಧಿಕಾರ ಹಿಡಿಯದೇ ಇದ್ದ ಪಕ್ಷವೊಂದು ಸಾಕಷ್ಟು ಪ್ರಭಾವಶಾಲಿ ಯಾಗಿ ಮುಂದುವರಿಯುತ್ತಿರುವ ಸೂಚನೆ ಇನ್ನೊಂದೆಡೆ. ನಮ್ಮ ದೇಶದ ಬುದ್ಧಿವಂತರ ರಾಜ್ಯ ಎಂದೇ ಬಹುಕಾಲ ಪರಿಗಣಿತ ವಾಗಿದ್ದ ಪಶ್ಚಿಮ ಬಂಗಾಳದಲ್ಲಿ ಬಿ.ಜೆ.ಪಿ. ಮುನ್ನಡೆಯನ್ನು ಸಾಧಿಸುವ ಸಾಧ್ಯತೆ ಇದೆ ಎಂದು ಕೇವಲ ಮೂರ‍್ನಾಲಕ್ಕು
ವರ್ಷಗಳ ಮುಂಚೆ ಹೆಚ್ಚಿನವರು ಊಹಿಸಿರಲಿಕ್ಕಿಲ್ಲ.
ಸ್ವತಂತ್ರ ಭಾರತದ ಚುನಾವಣಾ ವಿಶ್ಲೇಷಣೆಯನ್ನು ಮಾಡುತ್ತಿದ್ದ ಪಂಡಿತರೆಲ್ಲರೂ, ಪಶ್ಚಿಮ ಬಂಗಾಳ ಮತ್ತು ಕೇರಳಗಳಲ್ಲಿ ಕಮ್ಯುನಿಸ್ಟ್ ಪ್ರಭಾವ ಅಧಿಕವಿದ್ದುದರಿಂದಾಗಿ, ಬಿಜೆಪಿಯಂಥ ಪಕ್ಷಗಳು ಅಲ್ಲಿ ಎಂದೆಂದಿಗೂ ತಮ್ಮ ನೆಲೆಯನ್ನು ಕಂಡುಕೊಳ್ಳು ವುದು ಅಸಾಧ್ಯ ಎಂದೇ ಹೇಳುತ್ತಿದ್ದರು. ಅಂತಹ ಅಸಾಧ್ಯ ಎನಿಸಿದ್ದ ವಿದ್ಯಮಾನವೊಂದಕ್ಕೆ ಈಗ ದೇಶ ಸಾಕ್ಷಿಯಾಗುತ್ತಿದೆ. ಇನ್ನೂ ಮೂರು ಹಂತದ ಚುನಾವಣೆಯು ಅಲ್ಲಿ ನಡೆಯುವುದು ಬಾಕಿ ಇದ್ದರೂ, ಹಲವು ವಿಶ್ಲೇಷಣೆಗಳ ಪ್ರಕಾರ ಬಿಜೆಪಿ ಅಲ್ಲಿ ಸಾಕಷ್ಟು ಯಶಸ್ಸು ಗಳಿಸಲಿದೆ.
ಬಹುಮತ ಬರುತ್ತದೋ ಇಲ್ಲವೋ ಎಂಬುದನ್ನು ಫಲಿತಾಂಶ ಬಂದ ನಂತರವೇ ತಿಳಿಯಬೇಕಾದರೂ, ಸಾಕಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಬಹುತೇಕ ಖಚಿತ ಎನಿಸಿದೆ. ಇದನ್ನು ತಡೆಯಲು ಅಲ್ಲಿ ಅಧಿಕಾರದಲ್ಲಿರುವ ಮಮತಾ ಬ್ಯಾನರ್ಜಿ ಚಿತ್ರ ವಿಚಿತ್ರ ತಂತ್ರಗಳ ಮೊರೆ ಹೋಗಿದ್ದಾರೆ. ಕೇಂದ್ರದ ರಕ್ಷಣಾ ಸಿಬ್ಬಂದಿಯನ್ನು ಘೆರಾವೋ ಮಾಡಿ ಎಂದು ಹೇಳುವ ಮೂಲಕ, ಚುನಾವಣಾ ಆಯೋಗವು ಕೇಂದ್ರದ ಕೈಗೊಂಬೆ ಎಂದು ಆರೋಪಿಸುವ ಮೂಲಕ, ಮುಂದಿನ ಮೂರು ಹಂತದ ಚುನಾವಣೆಗಳನ್ನು ಒಟ್ಟಿಗೇ ಮಾಡಿ ಎಂದು ಮನವಿ ಮಾಡುವ ಮೂಲಕ ವಿಪರೀತ ಎನಿಸುವ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
ಅಧಿಕಾರಸ್ಥ ಮುಖ್ಯಮಂತ್ರಿಯೊಬ್ಬರ ಇಂತಹ ನಡೆಗಳು ಬಿಜೆಪಿಯ ಮುನ್ನಡೆಯನ್ನು ತಡೆಯುವಲ್ಲಿ ಸಫಲವಾದೀತೇ ಎಂಬು ದನ್ನು ತಿಳಿಯಲು ಫಲಿತಾಂಶ ಬರುವ ತನಕ ಕಾಯಬೇಕಿದೆ.