Saturday, 14th December 2024

ನಕಲಿ ಬಿತ್ತನೆ ಬೀಜಕ್ಕೆ ಕಡಿವಾಣ ಅಗತ್ಯ

ಟೊಮೊಟೊ, ಕ್ಯಾಪ್ಸಿಕಂ, ಅಲೂಗಡ್ಡೆ ಬೆಳೆಗ ಬಾಧಿಸುತ್ತಿರುವ ಭೀಕರ ಅಂಗಮಾರಿ, ಚುಕ್ಕೆ ರೋಗ ಊಜಿ ಹಾಗೂ ನುಸಿ ರೋಗದಿಂದಾಗಿ ರಾಜ್ಯಾದ್ಯಂತ ಅನೇಕ ರೈತರು ಲಕ್ಷಾಂತರ ರುಪಾಯಿ ನಷ್ಟ ಅನುಭವಿಸುವಂತಾಗಿದೆ. ನಕಲಿ ಬಿತ್ತನೆ ಬೀಜ, ನಕಲಿ ಕೀಟ ನಾಶಕ ಹಾಗೂ ನಕಲಿ ರಸಗೊಬ್ಬರದಿಂದಾಗಿ ರೈತರ ಕೈಗೆ ಬಂದ ಬೆಳೆ ಬಾಯಿಗೆ ಬರದಂತಾಗಿದೆ.

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಿಂಪಡಿಸುವ ಔಷಧಿಗಳಿಂದ ಬೆಳೆಗೆ ಅಂಟಿದ ರೋಗ ಗುಣವಾಗುತ್ತಿಲ್ಲ. ಅಷ್ಟರ ಮಟ್ಟಿಗೆ ಔಷಧಿಗಳು ಕಳಪೆಯಾಗಿವೆ. ಪ್ರತಿ ತಾಲೂಕು ಕೇಂದ್ರಗಳಲ್ಲೂ ಕ್ರಿಮಿನಾಶಕ ಅಂಗಡಿಗಳಿದ್ದು, ಅದರಲ್ಲಿ ಹೊರ ರಾಜ್ಯದ ನಕಲಿ ಹಾಗೂ ಪರವಾನಗಿ ಇಲ್ಲದೆ ನೂರಾರು ಕಂಪನಿಗಳ ನಕಲಿ ಕೀಟ ನಾಶಕಗಳನ್ನು ಮಾರಾಟ ಮಾಡ ಲಾಗುತ್ತಿದೆ. ಗುಣಮಟ್ಟವಿರುವ ಕಂಪನಿಗಳ ಹೆಸರಿನಲ್ಲಿ ಮಾರಾಟ ಮಾಡುವ ಮುಖಾಂತರ ರೈತರಿಗೆ ವಂಚನೆ ಮಾಡುತ್ತಿವೆ.

ಸಾಲ ಸೋಲ ಮಾಡಿ ಬೆಳೆದ ಬೆಳೆ ಸಮೃದ್ಧವಾಗಿ ಬಂದು ಕಷ್ಟವೆ ತೀರಲಿದೆ ಎಂದು ಕನಸು ಕಂಡಿದ್ದ ರೈತರಿಗೆ ಕಳಪೆ ಸಸಿಯಿಂದ ನಷ್ಟವಾಗುತ್ತಿದೆ. ಹಾಕಿದ ಬಂಡವಾಳ ಕೈಗೆ ಬರು ತ್ತಿಲ್ಲ. ಅಧಿಕಾರಿಗಳಿಗೆ ದೂರು ನೀಡಿದರೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಹಲವೆಡೆ ನಕಲಿ ಕೀಟನಾಶಕ ಮಾರಾಟಗಾರರನ್ನು ರೈತರೇ ಖುದ್ದಾಗಿ ಕೃಷಿ ಅಧಿಕಾರಿಗಳಿಗೆ ಹಿಡಿದು ಕೊಟ್ಟರೂ ಯಾವುದೇ ಕ್ರಮ ಕೈಗೊಳ್ಳದೆ ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಈಗಾಗಲೇ ಟೊಮೆಟೊ ಋತುಮಾನ ಪ್ರಾರಂಭ ವಾಗಿದ್ದು, ರೈತರನ್ನು ಕಳಪೆ ಬಿತ್ತನೆ ಬೀಜ, ಕಳಪೆ ರಸಗೊಬ್ಬರ, ಕಳಪೆ ಕೀಟನಾಶಕಗಳಿಂದ ಮುಕ್ತಿ ಮಾಡಬೇಕು.

ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ನಕಲಿ ಬಯೋ ಔಷಧ ಮಾರಾಟ ಮಾಡುವ ದಂಧೆಕೋರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಕೂಡಲೇ ತೋಟಗಾರಿಕೆ, ಕೃಷಿ ಮತ್ತು ಬೀಜ ಕಂಪನಿಗಳ ಮಾಲೀಕರ ಸಭೆ ಕರೆಯಬೇಕು. ನಕಲಿ ಬಿತ್ತನೆ ಬೀಜ, ನಕಲಿ ಕೀಟ ನಾಶಕ ಹಾಗೂ ನಕಲಿ ರಸಗೊಬ್ಬರ ನಿಯಂತ್ರಣಕ್ಕೆ ವಿಶೇಷ ತಂಡ ರಚಿಸಬೇಕಿದೆ. ಬಿತ್ತನೆ ಬೀಜ ಕಂಪನಿಗಳು ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕೆಂದು ಆದೇಶಿಸಬೇಕು.
Read E-Paper click here