Sunday, 15th December 2024

ಮಸೂದೆ ವಿವಾದ

ರೈತರ ರಕ್ಷಣೆಗಾಗಿ ಜಾರಿಗೊಳಿಸಲಾದ ಕಾಯಿದೆಯೊಂದು ಚರ್ಚೆಗಿಂತಲೂ ವಿವಾದವಾಗಿ ರೂಪುಗೊಂಡಿರುವುದು ದುರಂತ.

40 ರೈತ ಸಂಘಟನೆಗಳಿಗೆ ಪತ್ರ ಬರೆದಿರುವ, ಕೇಂದ್ರ ಕೃಷಿ ಸಚಿವಾಲಯದ ಜಂಟಿ ಕಾರ್ಯದರ್ಶಿ ವಿವೇಕ್ ಅಗರ್ವಾಲ್ ಸಮಸ್ಯೆ ಗಳ ಬಗ್ಗೆ ಚರ್ಚಿಸಲು ವಿವರ ನೀಡುವಂತೆ ಕೇಳಿಕೊಂಡಿದ್ಧಾರೆ. ಆದರೂ ಕೃಷಿ ಮಸೂದೆ ಹಲವು ರಾಜ್ಯಗಳಲ್ಲಿ ಪ್ರತಿಭಟನೆಯ ಮೂಲಕ ದಿನೇ ದಿನೆ ವಿವಾದಿತವಾಗಿ ರೂಪುಪಡೆಯುತ್ತಿದೆ.

ಪ್ರತಿಭಟನೆ ಅಂತ್ಯಗೊಳಿಸುವ ಸಲುವಾಗಿ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಸಿದ್ಧವಿದ್ದರೂ, ವಿವಾದ ಮುಂದುವರಿದಿದೆ. ಪ್ರತಿಭಟನೆಗಳಲ್ಲಿ ರಾಜಕೀಯ ವ್ಯಕ್ತಿಗಳ ಪಾಲ್ಗೊಳ್ಳುವಿಕೆಯಿಂದ ಪ್ರತಿಭಟನೆಗಳ ಸ್ವರೂಪ ಹೇಗೆ ಬದಲಾಗು ತ್ತದೆ ಎಂಬುದಕ್ಕೆ ಇದುವೇ ಸಾಕ್ಷಿ. ಈ ಮಸೂದೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ ದೇಶದಲ್ಲಿ ಪ್ರಜಾ ಪ್ರಭುತ್ವ ಇಲ್ಲ ಮತ್ತು ಅದು ಕಲ್ಪನೆಯಲ್ಲಿ ಮಾತ್ರ ಅಸ್ತಿತ್ವದಲ್ಲಿದೆ ಎಂಬ ಹೇಳಿಕೆ ನೀಡಿದ್ದಾರೆ.

ಜವಬ್ದಾರಿಯುತ ಪ್ರತಿಪಕ್ಷದ ಮುಖಂಡರಾಗಿ ಪ್ರಜಾಪ್ರಭುತ್ವದ ಬಗ್ಗೆ ಇಂತಹ ಹೇಳಿಕೆ ನೀಡಿರುವುದು ಸಮಂಜಸವಲ್ಲ. ಈ ರೀತಿ ಹೇಳಿಕೆಗಳ ಬದಲಾಗಿ ನೂತನ ಮಸೂದೆ ಜಾರಿಯಿಂದ ಉಂಟಾಗುವ ತೊಂದರೆಗಳ ಚರ್ಚಿಸಿ, ರೈತರಲ್ಲಿ ತಿಳಿವಳಿಕೆ ಮೂಡಿಸ ಬೇಕಿರುವುದು ಹೆಚ್ಚು ಸೂಕ್ತ. ಕೃಷಿ ಕಾಯಿದೆ ಜಾರಿ ವಿಚಾರದಲ್ಲಿ ಸಮರ್ಪಕ ಚರ್ಚೆಗಳ ಹೊರತಾಗಿ ಉಳಿದೆಲ್ಲ ಬೆಳವಣಿಗೆಗಳು
ಘಟಿಸಿವೆ. ಪ್ರತಿಭಟನೆ ಅಂತ್ಯಗೊಳಿಸಲು ಮತ್ತೆ ಮಾತುಕತೆ ನಡೆಸಲು ಸಿದ್ಧವಿರುವುದಾಗಿ ಕೇಂದ್ರ ತಿಳಿಸಿದ್ದರೆ, ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ರಾಷ್ಟ್ರಪತಿಯವರನ್ನು ಭೇಟಿ ಮಾಡಿ, ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸು ವಂತೆ ಮನವಿ ಸಲ್ಲಿಸಿದೆ.

ನೂತನ ಮಸೂದೆ ಚರ್ಚೆಯ ಹೊರತಾಗಿ ವಿವಾದದಿಂದಲೇ ಕಂಗೊಳಿಸುತ್ತಿರುವುದು ವಿಪರ್ಯಾಸ.