Sunday, 15th December 2024

ರೈತರ ಆತ್ಮಹತ್ಯೆ, ಗುಳೆ ತಪ್ಪಿಸಿ

ಪ್ರಸಕ್ತ ವರ್ಷದಲ್ಲಿ ಮುಂಗಾರು, ಹಿಂಗಾರು ಎರಡೂ ಋತುಮಾನಗಳಲ್ಲಿ ಸರಿಯಾದ ಮಳೆಯಾಗದೇ ಇರುವುದರಿಂದ ಯಾವೊಂದು ಬೆಳೆಯೂ ರೈತನ ಕೈ ಹಿಡಿದಿಲ್ಲ. ಸರಕಾರವೇನೋ ರಾಜ್ಯದ ೧೯೧ ತಾಲೂಕುಗಳನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಘೋಷಣೆ ಮಾಡಿದೆ. ಬರಗಾಲ ಪರಿಸ್ಥಿತಿ ಅರಿಯಲು ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ವಿವಿಧ ಜಿಲ್ಲೆಗಳಲ್ಲಿ ಪರಿಶೀಲನೆಯನ್ನೂ ಮಾಡಿ ಹೋಗಿದೆ. ಆದರೆ ಇದೆಲ್ಲ ಕಳೆದು ಒಂದು ತಿಂಗಳಾದರೂ ಈವರೆಗೂ ಬರ ಪರಿಹಾರ ಯೋಜನೆಗಳು ಅನುಷ್ಠಾನಗೊಂಡಿಲ್ಲ.

ಅನೇಕ ಕಡೆಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯಲೂ ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯುತ್ ಕಣ್ಣಾ ಮುಚ್ಚಾಲೆ ಆಟವಾಡುತ್ತಿರುವುದರಿಂದ ಅಷ್ಟೋ ಇಷ್ಟು ಬೆಳೆದ ಬೆಳೆಗಳು ಕೂಡ ರೈತರ ಕಣ್ಣ ಮುಂದೆಯೇ ಕಮರಿ ಹೋಗುತ್ತಿವೆ. ರಾಜ್ಯದಲ್ಲಿ ೮೦ ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದ್ದರೆ ೪೨ ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿದೆ. ಬೆಳೆ ವಿಮೆ ಹಣ ಕೂಡ ಬಿಡುಗಡೆ ಯಾಗಿಲ್ಲ.

ಇದರಿಂದ ಬೇಸತ್ತು ಕಳೆದ ಆರು ತಿಂಗಳಲ್ಲಿ ೭೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಉತ್ತರ ಕರ್ನಾಟಕದ ಜನರು ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ಮಳೆಯಾಶ್ರಿತ ಪ್ರದೇಶದ ಬರ ಪೀಡಿತ ಜನತೆಗೆ ನೀರಾವರಿ ಪ್ರದೇಶ ವೂ ಕನಿಷ್ಠ ಒಂದೆರಡು ತಿಂಗಳಾದರೂ ಉದ್ಯೋಗ ಒದಗಿಸುವ ಪ್ರಸಂಗವಿತ್ತು. ಈ ಭಾರೀ ನದಿಗಳು, ಕೆರೆಗಳು ಮತ್ತು ಆಣೆಕಟ್ಟು ಗಳು ಬತ್ತಿಹೋದುದು ಇವರಿಗೆ ನೀರಾವರಿ ಪ್ರದೇಶದಲ್ಲಿ ಉದ್ಯೋಗವಿಲ್ಲದಂತಾಗಿದೆ.

ಮಾತ್ರವಲ್ಲ, ನೀರಾವರಿ ಪ್ರದೇಶದ ಕೂಲಿಕಾರರು ಮತ್ತು ಕಸುಬುದಾರರು ಮತ್ತಿತರೇ ಬಡವರು ಕೂಡ ಗ್ರಾಮಗಳನ್ನು ತೊರೆದು ಹೋಗುವಂತಾಗಿದೆ. ಆದರೆ ಆಡಳಿತ ಮತ್ತು ಪ್ರತಿಪಕ್ಷಗಳು ಬರಗಾಲವನ್ನೇ ರಾಜಕೀಯಕ್ಕೆ ಬಳಸಿಕೊಂಡು ಸರಣಿ ಪ್ರವಾಸಗಳನ್ನು ಮಾಡುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಬಳಿ ಹೋಗುವುದಕ್ಕಿಂತ ಶಕ್ತಿ ಕೇಂದ್ರದಲ್ಲಿ ಕುಳಿತು ಬರ ಪರಿಹಾರ ಕಾರ್ಯಗಳನ್ನು ನೆರವೇರಿಸಬೇಕು. ಪ್ರತಿಪಕ್ಷದ ಬಿಜೆಪಿ ಮುಖಂಡರು ಬರಗಾಲದ ಹೆಸರಲ್ಲಿ ಪ್ರವಾಸ ಮಾಡುವ ಬದಲು ತಮ್ಮದೇ ಪಕ್ಷದ ಕೇಂದ್ರ ನಾಯಕರ ಮನವೊಲಿಸಿ ಹಣ ಬಿಡುಗಡೆ ಮಾಡಿಸಬೇಕು.