ಕಳೆದ ೧೫ ದಿನಗಳಲ್ಲಿ ಕಾವೇರಿ ನೀರಿಗಾಗಿ ಹೋರಾಟ, ಪ್ರತಿಭಟನೆ, ಬಂದ್‌ಗಳು ಎಡ ಬಿಡದೇ ನಡೆಯುತ್ತಿವೆ. ಪ್ರತಿಭಟನೆ, ಬಂದ್
ಮಾಡುವುದರಿಂದ ಬಲ ಪ್ರದರ್ಶನ ಮಾಡಬಹುದೇ ವಿನಾ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಇದೀಗ ರಾಜ್ಯದ ಅಲ್ಲಲ್ಲಿ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳೂ ಆರಂಭಗೊಂಡಿವೆ.
ಇನ್ಮುಂದೆಯಾದರೂ ಕೃಷಿಯಲ್ಲಿ ವೈeನಿಕ ಪದ್ಧತಿ ಅಳವಡಿಸಿಕೊಳ್ಳುವುದರಿಂದ ನೀರಿನ ಕೊರತೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು. ಹೆಚ್ಚು ನೀರು ಬೇಡುವ, ಕಡಿಮೆ ಆದಾಯ ನೀಡುವ ಬೆಳೆಯಾದ ಭತ್ತದ ಬದಲು ಕಡಿಮೆ ನೀರಿನಲ್ಲಿ ಹೆಚ್ಚು ಆದಾಯ ನೀಡುವ ಬೆಳೆಗಳಾದ ಆಲೂಗಡ್ಡೆ, ನೆಲಗಡಲೆ, ಮುಸುಕಿನಜೋಳ, ಎಲೆ ಕೋಸು, ದೊಣ್ಣೆ ಮೆಣಸಿನಕಾಯಿ, ಕಲ್ಲಂಗಡಿ, ಹೂವು ಬೆಳೆಯುವುದು ನೀರಿನ ಸಮಸ್ಯೆಗೆ ಪರಿಹಾರವಾಗಬಲ್ಲದು. ಅಲ್ಲದೆ ಕಾಲುವೆಗಳ ಮೂಲಕ ಬರುವ ನೀರನ್ನು ಭೂಮಿಗೆ ಹಾಯಿಸಿ ಕೃಷಿ ಮಾಡುವ ವಿಧಾನದ ಬದಲು ಹನಿ ನೀರಾವರಿಯನ್ನು ಆಳವಡಿಸಿ ಕೊಂಡರೆ ಹೆಚ್ಚು ಇಳುವರಿಯ ಜತೆಗೆ ನೀರಿನ ಕೊರತೆಯೂ ಕಡಿಮೆ ಮಾಡಿ ಮತ್ತಷ್ಟು ರೈತರಿಗೆ ಅನುಕೂಲವಾಗಲಿದೆ.
ಹನಿ ನೀರಾವರಿ ಯೋಜನೆಯಿಂದ ನೀರಿನ ಸದ್ಬಳಕೆ ಹಾಗೂ ಬೆಳೆ ಉತ್ಪಾದನೆಯಲ್ಲಿ ಹೆಚ್ಚಳ ಕಾಣಬಹುದು. ಈ ಪದ್ಧತಿಯಿಂದ ಬೆಳೆಗಳಿಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ನೀಡಬಹುದು. ಪ್ರತಿ ಎಕರೆಗೆ ಶೇ.೫೦ರಿಂದ ೮೦ರಷ್ಟು ನೀರಿನ ಉಳಿತಾಯ ವಾಗುತ್ತದೆ. ಸಾಂಪ್ರದಾಯಿಕ ವಿಧಾನದಲ್ಲಿ ನೀರನ್ನು ಸಮಾನ್ಯವಾಗಿ ಮಣ್ಣಿನ ಕಾಲುವೆಯಲ್ಲಿ ಹಾಯಿಸುವುದರಿಂದ ಶೇ.೩೦ ರಿಂದ ೪೦ ರಷ್ಟು ನೀರು ಪೋಲಾಗುತ್ತದೆ. ಜತೆಗೆ ಜಮೀನಿನ ಗುಣಮಟ್ಟವೂ ಕಡಿಮೆಯಾಗುತ್ತದೆ.
ಆದರೆ, ಸೂಕ್ಷ್ಮ ನೀರಾವರಿ ಪದ್ಧತಿಯಿಂದ ನೀರನ್ನು ಕೊಳವೆ ಮೂಲಕ ನೇರವಾಗಿ ಗಿಡಗಳ ಬುಡಕ್ಕೆ ಸಾಗಿಸಿ ಬೇರಿನ ವಲಯದ ಭಾಗ ನೆನೆಯುವಂತೆ ಮಾಡಿ ಗಿಡದ ಬೆಳವಣಿಗೆಗೆ ಅಗತ್ಯ ಇರುವಷ್ಟು ನೀರನ್ನು ಕೊಡುವುದರಿಂದ ಕಳೆಯೂ ಕಡಿಮೆಯಾಗಿ ಬೆಳೆ ಚನ್ನಾಗಿ ಬೆಳೆಯುತ್ತದೆ. ಹನಿ ನೀರಾವರಿಯಿಂದ ಕೂಲಿಯ ಖರ್ಚು ಕಡಿಮೆಯಾಗುತ್ತದೆ, ಹೆಚ್ಚು ಲಾಭದ ಬೆಳೆಯನ್ನು ಬೆಳೆಯ ಬಹುದಾಗಿದೆ. ಆದ್ದರಿಂದ ರೈತರು ವೈಜ್ಞಾನಿಕ ಕೃಷಿ ಪದ್ಧತಿಯತ್ತ ಗಮನಹರಿಸಬೇಕಿದೆ.