ಕರ್ನಾಟಕದಲ್ಲಿ ಆರ್ಥಿಕ ಬಿಕ್ಕಟ್ಟು, ಕರೋನಾದ ಸಾಲು ಸಾಲು ಹೊಡೆತದ ಜತೆಜತೆಗೆ ನಾಯಕತ್ವ ಬದಲಾವಣೆಯ ಕೂಗಿನಿಂದ ಕಳೆದ ಕೆಲ ತಿಂಗಳಿನಿಂದ ಸರಕಾರದಲ್ಲಿ ಅಭಿವೃದ್ಧಿಗೆ ಕೆಲಸಗಳಿಗೆ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ.
ಇದೀಗ ರಾಜ್ಯಕ್ಕೆ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ಸ್ವೀಕರಿಸಿದ್ದು, ಮೊದಲ ದಿನವೇ ಅಧಿಕಾರಿಗಳಿಗೆ ಅಭಿವೃದ್ಧಿಯ ಪಾಠ ಮಾಡಿದ್ದಾರೆ. ಇದರೊಂದಿಗೆ ರೈತರ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಶಿಷ್ಯವೇತನ ಸೇರಿದಂತೆ ಮೊದಲ ದಿನವೇ ಹಲವು ಮಹತ್ವದ ನಿರ್ಣಯವನ್ನು ಕೈಗೊಂಡಿದ್ದಾರೆ. ಅಽಕಾರ ಸ್ವೀಕರಿಸಿದ ಮರು ದಿನವೇ ಕಾರವಾರ ಮತ್ತು ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಯಾದ ಬಳಿಕ ‘ಹನಿಮೂನ್ ಟೈಮ್’ ತಗೆದುಕೊಳ್ಳದೇ ಕಾರ್ಯಪ್ರವೃತ್ತರಾಗಿದ್ದಾರೆ.
ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಂಪುಟದಲ್ಲಿಯೇ ಕರೋನಾ ಸಂಕಷ್ಟವಿರುವುದರಿಂದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಲು ಮೊದಲ ದಿನವೇ ಅಧಿಕಾರಿಗಳಿಗೆ ಸೂಚನೆ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆ. ಆದರೆ ಇದು ಕೇವಲ ಹೇಳಿಕೆ, ಘೋಷಣೆಗೆ ಸೀಮಿತ ವಾಗದೇ ಪ್ರಾಯೋಗಿಕವಾಗಿಯೂ ಜಾರಿಗೊಳಿಸಬೇಕಿದೆ. ಇನ್ನು ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಘೋಷಿಸಿರುವ ಹಲವು ಯೋಜನೆಗಳು ಈಗಲೂ ಕಡತದಲ್ಲಿಯೇ ಉಳಿದಿವೆ. ಈ ಯೋಜನೆಯನ್ನು ಜಾರಿಗೊಳಿ ಸುವ ಜತೆಜತೆಗೆ, ಮುಂದೆ ಎದುರಾಗಲಿರುವ ಪ್ರವಾಹ, ಕರೋನಾ ಮೂರನೇ ಅಲೆಯನ್ನು ಎದುರಿಸಲು ಸನ್ನದ್ಧವಾಗಬೇಕು.
ಸಾಲು ಸಾಲು ಸವಾಲುಗಳ ನಡುವೆ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಬೊಮ್ಮಾಯಿ ಅವರಿಗೆ ಜಲಸಂಪನ್ಮೂಲ, ಆರ್ಥಿಕ ಇಲಾಖೆ ಹಾಗೂ ಕಾನೂನು ಇಲಾಖೆಯಲ್ಲಿ ಉತ್ತಮ ಹಿಡಿತವಿದ್ದು, ಕೇಂದ್ರದ ನಾಯಕರೊಂದಿಗೂ ಉತ್ತಮ ಸಂಬಂಧ ಹೊಂದಿದ್ದಾರೆ. ಆದ್ದರಿಂದ ಈ ಒಡನಾಟವನ್ನು ಬಳಸಿಕೊಂಡು ಕೇಂದ್ರದಿಂದ ಬರಬೇಕಿರುವ ಅನುದಾನ ಪಡೆದು ರಾಜ್ಯವನ್ನು ಅಭಿವೃದ್ಧಿ ಪಥದತ್ತ ತಗೆದುಕೊಂಡು ಹೋಗಬೇಕಿದೆ.