Saturday, 14th December 2024

ಹೆಣ್ಣುಭ್ರೂಣ ಹತ್ಯೆ ಮಟ್ಟ ಹಾಕಬೇಕಿದೆ

ಮಂಡ್ಯ- ಪಾಂಡವಪುರ ರಸ್ತೆಯಲ್ಲಿದ್ದ ಆಲೆಮನೆಯೊಂದರಲ್ಲಿ ಸ್ಕ್ಯಾನಿಂಗ್ ಯಂತ್ರ ಇರಿಸಿ, ಅಲ್ಲಿಯೇ ಲಿಂಗ ಪತ್ತೆ ಮಾಡಿ, ಹೆಣ್ಣುಭ್ರೂಣವೆಂದು ಗೊತ್ತಾಗುತ್ತಿದ್ದಂತೆ ಗರ್ಭಪಾತ ಮಾಡಿಸುತ್ತಿದ್ದ ಪ್ರಕರಣವೊಂದು ಇತ್ತೀಚೆಗೆ ಬಯಲಾಗಿದೆ.

ಬೆಂಗಳೂರು, ರಾಮನಗರ,ಮಂಡ್ಯ, ಮೈಸೂರಿನಲ್ಲಿ ಈ ಕೃತ್ಯದಲ್ಲಿ ತೊಡಗಿದ್ದ ಜಾಲವೊಂದು ಕಳೆದ ಮೂರು ವರ್ಷಗಳಲ್ಲಿ ೬೫೦ಕ್ಕೂ ಅಧಿಕ ಭ್ರೂಣಲಿಂಗ ಪತ್ತೆ ಮಾಡಿರುವ ಸಂಗತಿ ತನಿಖೆಯಿಂದ ಬಯಲಾಗಿದೆ. ಅದರಲ್ಲಿ ೨೦೦ಕ್ಕೂ ಅಧಿಕ ಹೆಣ್ಣು ಭ್ರೂಣಗಳ ಹತ್ಯೆ ಆಗಿದೆ ಎಂಬುದು ಸಾರ್ವಜನಿಕರನ್ನು ದಿಗಿಲುಗೊಳಿಸಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಭಾಗಗಳಲ್ಲೂ ಭ್ರೂಣ ಲಿಂಗ ಪತ್ತೆಯ ಹಾವಳಿ ಕಂಡುಬಂದಿರುವುದು ಈ ಜಾಲ ಎಷ್ಟು ಸಕ್ರಿಯ ವಾಗಿದೆ ಎನ್ನುವುದಕ್ಕೆ ನಿದರ್ಶನ. ಸಮಾಜದಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿದಂತೆ, ಸುಶಿಕ್ಷಿತ ಸಮುದಾಯದ ಪ್ರಮಾಣ ಹೆಚ್ಚುತ್ತಾ ಹೋದಂತೆ
ಹೆಣ್ಣುಭ್ರೂಣ ಹತ್ಯೆಯಂತಹ ಪಿಡುಗು ನಿವಾರಣೆಯಾಗುತ್ತಾ ಹೋಗಬೇಕಿತ್ತು. ಆದರೆ, ರಾಜ್ಯದಲ್ಲಿ ನಡೆದಿರುವ ಬೆಳವಣಿಗೆಗಳು ತದ್ವಿರುದ್ಧವಾಗಿವೆ. ಇಷ್ಟಕ್ಕೂ ಹೆಣ್ಣುಮಗುವನ್ನು ಈ ಮಟ್ಟಿಗೆ ದ್ವೇಷಿಸಲು ಕಾರಣವೇನು ಎಂಬುದೇ ಅರ್ಥವಾಗುತ್ತಿಲ್ಲ. ಹೆಣ್ಣುಮಕ್ಕಳನ್ನು ಹೊರೆ ಎಂದು ಭಾವಿಸುವ
ಮನಃಸ್ಥಿತಿಯೇ ಈ ಪ್ರವೃತ್ತಿಗೆ ಮೂಲ ಕಾರಣ. ಗಂಡುಮಕ್ಕಳ ಬಗ್ಗೆ ವಿಪರೀತ ಒಲವು ತೋರುವ ಪಕ್ಷಪಾತ ಧೋರಣೆಯು ತಲೆಮಾರುಗಳಿಂದಲೂ ಗಟ್ಟಿಯಾಗಿ ನೆಲೆಯೂರಿದೆ.

ಸಮಾಜದಲ್ಲಿ ಬೇರೂರಿರುವ ಈ ಮನೋಭಾವದಿಂದಾಗಿ ಹೆಣ್ಣು-ಗಂಡಿನ ಲಿಂಗಾನುಪಾತದಲ್ಲೂ ಕುಸಿತ ವಾಗಿದೆ. ೨೦೧೧ರ ಜನಗಣತಿ ಪ್ರಕಾರ, ಪ್ರತಿ ಸಾವಿರ ಪುರುಷರಿಗೆ ಇರುವ ಮಹಿಳೆಯರ ಪ್ರಮಾಣ ೯೧೮ ಮಾತ್ರ. ಲಿಂಗಾನುಪಾತ ಸಮ ಇದ್ದರಷ್ಟೇ ಅದು ಸ್ವಸ್ಥ ಸಮಾಜದ ಲಕ್ಷಣ. ಈ ಅನುಪಾತದಲ್ಲಿ ಏರುಪೇರು ಮಾಡುತ್ತಿರುವುದು ಸ್ವಯಂಕೃತ ಅಪರಾಧ. ಸುಧಾರಿತ ತಂತ್ರeನವು ಗ್ರಾಮಾಂತರ ಭಾಗಗಳಲ್ಲೂ ಸಿಗುವಂತಾಗಿರುವುದು, ಅದರ ದುರುಪ ಯೋಗ ಹೆಚ್ಚಿರುವುದು, ವರದಕ್ಷಿಣೆ ಪಿಡುಗು ಮತ್ತು ಮಗನನ್ನು ಅನ್ನದಾತನನ್ನಾಗಿ ನೋಡುವ ಪ್ರವೃತ್ತಿಯು ಹೆಣ್ಣುಭ್ರೂಣಕ್ಕೆ ಕಂಟಕವಾಗಿದೆ. ಭ್ರೂಣಲಿಂಗ ಪತ್ತೆಗೆ ಕಡಿವಾಣ ಹಾಕಿ, ಹೆಣ್ಣುಭ್ರೂಣ ಹತ್ಯೆಯನ್ನು ತಡೆಗಟ್ಟುವಲ್ಲಿ ಆರೋಗ್ಯ ಇಲಾಖೆಯ ಪಾತ್ರ ಮಹತ್ವದ್ದಾಗಿದೆ.

ಸಮಾಜದಲ್ಲಿ ಜಾಗೃತಿ ಮೂಡಿಸುವ ಜತೆಜತೆಗೆ ಕುಕೃತ್ಯದಲ್ಲಿ ತೊಡಗಿರುವ ಜಾಲವನ್ನು ಮಟ್ಟ ಹಾಕುವ ಕೆಲಸವನ್ನೂ ಇಲಾಖೆ ಮಾಡಬೇಕಿದೆ