Thursday, 12th December 2024

ಅಗ್ನಿ ದುರಂತಗಳ ನಿಯಂತ್ರಣಕ್ಕೆ ನಿರ್ದಿಷ್ಟ ಕ್ರಮ ಅಗತ್ಯ

ಡಿಸೆಂಬರ್ ಮುಗಿಯುತ್ತಿದ್ದಂತೆಯೇ ಎಲ್ಲೆಡೆ ಬಿಸಿಲು ತನ್ನ ಪ್ರಖರತೆಯನ್ನು ತೀವ್ರಗೊಳಿಸಿಕೊಂಡಿದೆ. ಇದರಿಂದ ಬೆಟ್ಟದ ಸಾಲು, ಕಿರು ಅರಣ್ಯಗಳಲ್ಲಿ ಅಗ್ನಿ ದುರಂತಗಳು ಸಂಭವಿಸುತ್ತಿವೆ.

ಸೌದೆ, ಸಣ್ಣ ಪುಟ್ಟ ಪ್ರಾಣಿಗಳ ಬೇಟೆ ಸೇರಿದಂತೆ ಇತರ ಉದ್ದೇಶಗಳಿಂದಾಗಿ ಕಿಡಿಗೇಡಿಗಳು ಬೆಂಕಿ ಹಾಕುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೆ, ಬೆಟ್ಟದ ತಪ್ಪಲಿನ ಭೂಮಿ ಒತ್ತುವರಿ, ಮಣ್ಣಿನ ಗಣಿಗಾರಿಕೆ ಸೇರಿದಂತೆ ಇತರ ಉದ್ದೇಶಗಳು ಅಗ್ನಿ ದುರಂತಕ್ಕೆ ಕಾರಣವಾಗುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ ಸಸಿಗಳನ್ನು ನೆಡುವುದಕ್ಕೆ ಮಾತ್ರ ಸೀಮಿತವಾಗಿದೆಯೇ ವಿನಃ ಬೆಳೆದಿರುವ ಸಸಿಗಳನ್ನು ಬೆಂಕಿ ಯಿಂದ ರಕ್ಷಿಸುವ ಕಡೆಗೆ ಅಷ್ಟಾಗಿ ಪ್ರಾಮುಖ್ಯತೆಯನ್ನೇ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಆದ್ದರಿಂದ ಅಗ್ನಿ ದುರಂತಗಳಿಂದ ಕಿರು ಅರಣ್ಯಗಳನ್ನು ರಕ್ಷಿಸುವ ಕೆಲಸ ಚುರುಕಾಗಬೇಕಿದೆ. ಮಳೆಗಾಲ ಮುಕ್ತಾಯವಾಗಿ ಬಿಸಿಲು ಪ್ರಾರಂಭವಾಗು ತ್ತಿದ್ದಂತೆ ಬೆಟ್ಟದ ಸಾಲಿನ ರಸ್ತೆಗಳ ಬದಿಯಲ್ಲಿ ಒಣಗಿ ನಿಂತ ಹುಲ್ಲನ್ನು ಯಂತ್ರಗಳ ಮೂಲಕ ಕತ್ತರಿಸಿ ಅರಣ್ಯ ಇಲಾಖೆ ಸಿಬ್ಬಂದಿಯೇ ಬೆಂಕಿ ಹಾಕಿ ಸುಡಬೇಕು. ಈ ಮೂಲಕ ರಸ್ತೆ ಬದಿಯಿಂದ ಆಕಸ್ಮಿಕವಾಗಿ ಬೆಂಕಿ ಅರಣ್ಯ ಅಥವಾ ಬೆಟ್ಟದ ಕಡೆಗೆ ಹರಡದಂತೆ ಮುಂಜಾಗ್ರತೆ ವಹಿಸಬೇಕು. ಬೆಂಕಿ ಕಾಣಿಸಿಕೊಂಡಾಗ ಮಾಹಿತಿ ನೀಡುವ ನಿಯಂತ್ರಣ ಕೊಠಡಿಗಳ ಟೆಂಟ್‌ಗಳನ್ನು ತೆರೆಯಬೇಕು.

ಬೆಟ್ಟದ ತಪ್ಪಲಿನ ಹಾಗೂ ಕಿರು ಅರಣ್ಯ ಪ್ರದೇಶದ ಅಂಚಿನ ಗ್ರಾಮಗಳ ಜನರಲ್ಲಿ ಬೆಂಕಿಯಿಂದಾಗಿ ಅರಣ್ಯ ಹಾಗೂ ಸಣ್ಣ ಪುಟ್ಟ ಪ್ರಾಣಿಗಳ ನಾಶ ವಾಗುವ ಕುರಿತಂತೆ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕು. ಪ್ರವಾಸಿಗರು ಕಾರಿನಲ್ಲಿ ಸಿಗರೇಟು ಸೇದಿ ಅರಣ್ಯ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಎಸೆಯುವುದರಿಂದಲೂ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಹೀಗಾಗಿ ಅರಣ್ಯ ಇಲಾಖೆ ಬೇಸಿಗೆ ಮುಕ್ತಾಯವಾಗು ವವರೆಗೂ ಹೆಚ್ಚುವರಿಯಾಗಿ ಗಸ್ತು ಪ್ರಾರಂಭಿಸಬೇಕು. ಹಾಗೆಯೇ ಬೆಂಕಿ ಕಾಣಿಸಿಕೊಂಡಾಗ ಸಾರ್ವಜನಿಕರು ಮಾಹಿತಿ ನೀಡಲು ಅನುಕೂಲ ವಾಗುವಂತೆ ಬೆಟ್ಟದ ಸಾಲು ಹಾಗೂ ಕಿರು ಅರಣ್ಯಗಳ ಮೂಲಕ ಹಾದು ಹೋಗುವ ರಸ್ತೆಗಳ ಬದಿಗಳಲ್ಲಿ ಇಲಾಖೆ ಅಧಿಕಾರಿಗಳ ಅಥವಾ ಕಂಟ್ರೋಲ್ ರೋಂ ದೂರವಾಣಿ ಸಂಖ್ಯೆ ನಾಮ-ಲಕ ಹಾಕಬೇಕು