ಎಲ್ಲೆಡೆ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಅನೇಕ ಕಡೆ ಕಾಳ್ಗಿಚ್ಚು ಸಂಭವಿಸುತ್ತಿವೆ. ಸಾಮಾನ್ಯ ವಾಗಿ ಪ್ರತಿವರ್ಷವೂ ಜನವರಿ ಮಧ್ಯಭಾಗದಿಂದ ಏಪ್ರಿಲ್ ಮಧ್ಯಭಾಗದವರೆಗೆ ಕಾಳ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಆದರೆ ಅದನ್ನು ನಂದಿಸುವ ಸೂಕ್ತ ವ್ಯವಸ್ಥೆ ಇಲ್ಲದಿದ್ದಕ್ಕೆ ಪ್ರಾಣ ಹಾನಿಗಳೂ ಸಂಭವಿಸುತ್ತಲೇ ಇವೆ.
ಬೆಂಕಿ ಕಂಡಾಗ ನಂದಿಸಲು ಮುಂದಾಗುವ ಅರಣ್ಯ ಇಲಾಖೆ ಸಿಬ್ಬಂದಿಗೆ ಸೂಕ್ತ ರಕ್ಷಣಾ ವ್ಯವಸ್ಥೆ ಇದೆಯೇ ಎಂಬುದನ್ನು ಅಧಿಕಾರಿಗಳು ಖಾತರಿ ಮಾಡಿಕೊಳ್ಳಬೇಕು. ಪ್ರಸ್ತುತ, ಬೆಂಕಿಯನ್ನು ನಂದಿಸಲು ನೀರು ಸಿಂಪಡಿಸುವುದು, ಮಣ್ಣು ಎರಚುವುದು, ದೊಡ್ಡ ಬಡಿಗೆಯಿಂದ ಬಡಿಯುವಂತಹ ವಿಧಾನಗಳಿವೆ. ಆದರೆ ಇವೆಲ್ಲವೂ ಅವೈeನಿಕ ಮತ್ತು ಅಸುರಕ್ಷಿತ. ಒಬ್ಬರೋ ಇಬ್ಬರೋ ಸಿಬ್ಬಂದಿ ಬೆಂಕಿ ಆರಿಸಲು ತೆರಳುವುದು ಎಂದಿಗೂ ಅಪಾಯಕರ.
ಏಳೆಂಟು ಜನರ ಗುಂಪು ಸಮರ್ಪಕ ಯೋಜನೆಯೊಂದಿಗೆ ಕಾರ್ಯೋನ್ಮುಖ ಆಗಬೇಕು. ಒಬ್ಬರು ನೀರು ಸಿಂಪಡಿಸುವುದು, ಇನ್ನೊಬ್ಬರು ಬಡಿಗೆಯಲ್ಲಿ ಬಡಿಯುವುದು, ಮಗದೊಬ್ಬರು ಬೆಂಕಿ ಯಾವ ದಿಕ್ಕಿನಲ್ಲಿ ಪಸರಿಸುತ್ತಿದೆ ಎಂಬ ಸೂಚನೆಯನ್ನು ಕೊಡುವುದು ಮತ್ತೂ ಕೆಲವರು, ಬೆಂಕಿಯ ಕಾವಿಗೆ ಬಲು ಬೇಗನೇ ನಿರ್ಜಲೀಕರಣಕ್ಕೊಳಗಾಗುವ ಸಿಬ್ಬಂದಿಗೆ ಕುಡಿಯಲು ನೀರು ಪೂರೈಸುವುದನ್ನು ಮಾಡಬೇಕು. ಇಂತಹ ಅಪಾಯಕರ ವೃತ್ತಿಯಲ್ಲಿ ತೊಡಗಿರುವವರಿಗೆ ಸುಲಭವಾಗಿ ಬೆಂಕಿ ತಗುಲದಂತಹ ಬಟ್ಟೆ, ಕೈಗವಸು, ಮುಖಗವಸು, ಸುರಕ್ಷಿತ ಬೂಟುಗಳು, ಸೂಕ್ತ ರಕ್ಷಣಾ ಕವಚಗಳಂತಹ ಸಾಮಗ್ರಿಗಳನ್ನು ಒದಗಿಸಬೇಕು.
ಆದರೆ, ಇವೆಲ್ಲವನ್ನು ಅಳವಡಿಸಿಕೊಂಡರೂ ಇದೊಂದು ಅಸುರಕ್ಷಿತ ವಿಧಾನವೇ ಸರಿ. ಸುರಕ್ಷಿತ ತಂತ್ರಜ್ಞಾನ ಮತ್ತು ಸಲಕರಣೆ ಗಳನ್ನು ಬಳಸುವ ಬಗ್ಗೆ ಸರಕಾರ ವಿಚಾರ ಮಾಡಬೇಕು. ಸುಧಾರಿತ, ಅತ್ಯಾಧುನಿಕ ಕ್ರಮವಾದ ವೈಮಾನಿಕ ಅಗ್ನಿಶಾಮಕ ವಿಧಾನ ಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ಗಮನಹರಿಸಬೇಕು. ಇದರಿಂದ ಅಗ್ನಿ ಅನಾಹುತಗಳ ಜತೆಯಲ್ಲಿ ಸಿಬ್ಬಂದಿಯ ಪ್ರಾಣಹಾನಿ ಯನ್ನೂ ತಪ್ಪಿಸಬಹುದು.
ಮುಖ್ಯವಾಗಿ ಕಾಳ್ಗಿಚ್ಚು ಹುಟ್ಟದಂತೆ ಎಲ್ಲ ರೀತಿಯ ಬಿಗಿ ಕ್ರಮಗಳನ್ನೂ ಇಲಾಖೆ ತೆಗೆದುಕೊಳ್ಳಬೇಕು. ಮುಖ್ಯವಾಗಿ ಬೇಸಿಗೆಯ ದಿನಗಳಲ್ಲಿ ಜನರು ಅರಣ್ಯದ ಸುತ್ತಮುತ್ತಲ ಪ್ರದೇಶಗಳನ್ನು ವೀಕ್ಷಿಸಲು ಬರುವುದನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಒಂದು ವೇಳೆ ಅನುಮತಿ ಪಡೆದು ಬಂದರೂ ಅಂತಹವರ ಮೇಲೆ ಸೂಕ್ಷ್ಮ ಕಣ್ಗಾವಲಿಡಬೇಕು. ಅಲ್ಲಿ ಕ್ಯಾಂಪ್ ಫೈರ್‌ನಂತಹ ಚಟುವಟಿಕೆ ಗಳಿಗೆ ಎಂದೂ ಅನುಮತಿ ಕೊಡಬಾರದು