ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭವಾದಾಗಿನಿಂದ ಸಾರಿಗೆ ಬಸ್ಗಳಲ್ಲಿ ಮಹಿಳೆಯರು ಪ್ರಯಾಣಿಸುವ ಸಂಖ್ಯೆ ಹೆಚ್ಚುತ್ತಲೇ ಇದೆ. ಯೋಜನೆ ಆರಂಭವಾಗಿ ಇನ್ನೂ ಎರಡು ವಾರ ಕಳೆದಿಲ್ಲ, ಅಷ್ಟರೊಳಗೇ ೧೦೦ ಕೋಟಿ ರು. ಮೊತ್ತದ ಪ್ರಯಾಣವನ್ನು ಮಹಿಳೆಯರು ಮಾಡಿದ್ದಾರೆ.
ಸರಕಾರ ಮಹಿಳೆಯರ ಅನುಕೂಲಕ್ಕೆ ಯೋಜನೆ ಜಾರಿಗೊಳಿಸಿದೆಯಾದರೂ, ಇದರಿಂದ ಅನನುಕೂಲವೇ ಹೆಚ್ಚಾಗುತ್ತಿರುವುದು ಕಳೆದ ಎರಡು ವಾರಗಳಲ್ಲಿ ಗೊತ್ತಾಗಿದೆ. ಗಾರ್ಮೆಂಟ್ಸ್ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸೇರಿದಂತೆ ಬಸ್ ಚಾರ್ಜ್ ಮೊತ್ತವೂ ಆರ್ಥಿಕ ಹೊರೆ ಎಂದುಕೊಳ್ಳುವ ಮಹಿಳೆ ಯರು ಯೋಜನೆಯ ಉಪಯೋಗ ಪಡೆದುಕೊಳ್ಳಲಿ ಎಂಬುದು ಯೋಜನೆ ಜಾರಿಯ ತಾತ್ಪರ್ಯ. ಆದರೆ ವಾಸ್ತವವಾಗಿ ಆಗುತ್ತಿರುವುದೇ ಬೇರೆ, ವಿನಾಕಾರಣ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವುದು, ಪ್ರಿಯಕರನನ್ನು ಹುಡುಕಿಕೊಂಡು ಹೋಗುವುದು, ಮನೆಯಲ್ಲಿ ಜಗಳ ಮಾಡಿಕೊಂಡು ಹೋಗುವುದು, ಹೇಗೂ ಫೀ ಇದೆ ಸುತ್ತಾಡಿ ಬರೋಣ ಎಂಬುದು…
ಮತ್ತಿತರ ದೂರುಗಳು ಕೇಳಿಬರುತ್ತಿವೆ. ಮಹಿಳೆಯರು ಪ್ರಯಾಣಿಸುವ ಪ್ರತಿಯೊಂದು ರುಪಾಯಿಯನ್ನೂ ರಾಜ್ಯ ಸರಕಾರ ಸಾರಿಗೆ ಇಲಾಖೆಗೆ ಪಾವತಿಸಬೇಕು ಎಂಬುದು ಮಹಿಳೆಯರು ತಿಳಿದುಕೊಳ್ಳಬೇಕು. ಸರಕಾರ ಪಾವತಿಸುವ ದುಡ್ಡು ನಿಮ್ಮ ತೆರಿಗೆ ಹಣದಿಂದಲೇ ಎಂಬುದು ಗಮನಾರ್ಹ. ಆದ್ದರಿಂದ ಅಗತ್ಯವಿದ್ದರೆ ಮಾತ್ರ ಪ್ರಯಾಣ ಮಾಡಬೇಕು ಎಂಬುದನ್ನು ಮಹಿಳೆಯರು ತಿಳಿದುಕೊಳ್ಳಬೇಕು. ಇನ್ನು, ಬಸ್ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಿರುವುದರಿಂದ ನೂಕುನುಗ್ಗುಲು ಆಗುತ್ತಿದೆ. ಕೆಲವೆಡೆ ಬಸ್ಗಳ ಬಾಗಿಲುಗಳನ್ನೂ ಕಿತ್ತಿರುವ ಕುರಿತು ವರದಿಯಾಗಿದೆ. ಈ ರೀತಿ ಬಸ್ಗಳಿಗೆ ಆಗಿರುವ ಹಾನಿಯನ್ನು ಬಸ್ಗಳ ಚಾಲಕರು ಮತ್ತು ನಿರ್ವಾಹಕರು ತಮ್ಮ ಸಂಬಳದಲ್ಲಿನ ದುಡ್ಡು ಕೊಟ್ಟು ಸರಿದೂಗಿಸಬೇಕಾಗುತ್ತದೆ
ಎಂಬುದು ನೆನಪಿರಲಿ. ಅಲ್ಲದೆ, ಕೆಲವು ಬಸ್ಗಳಲ್ಲಿ ಹಿರಿಯ ನಾಗರಿಕರಿಗೆ ಮೀಸಲಾದ ಆಸನಗಳನ್ನೂ ಮಹಿಳೆಯರೇ ಆಕ್ರಮಿಸಿಕೊಳ್ಳುವುದರಿಂದ
ವಯಸ್ಸಾದವರು ಪ್ರಯಾಣಿಸಲು ಕಷ್ಟಕರವಾಗಿದೆ.
ಜತೆಗೆ ಕಚೇರಿ, ಆಸ್ಪತ್ರೆ, ತುರ್ತು ಕಾರ್ಯದ ನಿಮಿತ್ತ ದೂರದ ಸ್ಥಳಗಳಿಗೆ ಸಂಚರಿಸಬೇಕಾದ ಪುರುಷರು ಆಸನಗಳಿಲ್ಲದೆ ನಿಂತು ಪ್ರಯಾಣಿಸ ಬೇಕಾಗಿದೆ. ಸರಕಾರ ಯೋಜನೆ ಜಾರಿಗೆ ತರುವ ಸಂದರ್ಭದಲ್ಲಿ ಹೇಳಿದಂತೆ ಶೇ ೫೦ರಷ್ಟು ಸೀಟುಗಳನ್ನು ಕಡ್ಡಾಯವಾಗಿ ಪುರುಷರಿಗೆ ಮೀಸಲಿಡಬೇಕು. ಆ ಮೂಲಕ ಸರಕಾರದ ಯೋಜನೆಯೊಂದು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು.