Thursday, 12th December 2024

ಸ್ವಾತಂತ್ರ್ಯದ ಸ್ಮರಣೆ ದೇಶದೆಲ್ಲೆಡೆ ಹರಡಲಿ

ದೇಶ ಸ್ವತಂತ್ರಗೊಂಡು ೭೫ ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಅಮೃತ ಮಹೋತ್ಸವ ನಡೆಸುತ್ತಿದೆ. ಇಂದಿನಿಂದ ಗುಜರಾತ್‌ನ ಸಬರಮತಿ ಆಶ್ರಮದಲ್ಲಿ ಚಾಲನೆ ಪಡೆಯಲಿರುವ ಕಾರ್ಯಕ್ರಮಕ್ಕಾಗಿ ಆಜಾದಿ ಕಾ ಅಮೃತ್ ಮಹೋತ್ಸವ್ ಎಂದು ಹೆಸರಿಸಲಾಗಿದೆ.

ಸ್ವಾತಂತ್ರ್ಯದ ಪರಿಕಲ್ಪನೆ, ಹೋರಾಟಗಾರರ ತ್ಯಾಗ, ಬಲಿದಾನವನ್ನು ಸ್ಮರಿಸುವ ನಿಟ್ಟಿನಲ್ಲಿ ಇಂದೊಂದು ಮಹತ್ವದ
ಕಾರ್ಯಕ್ರಮ. ಈ ಆಚರಣೆ ಮಹತ್ವವಾಗಿದ್ದು, ಇತರ ರಾಜ್ಯಗಳಿಗೂ ಅನುಕರಣೀಯ. ಗುಜರಾತ್‌ನ ಗಾಂಧಿನಗರದ ಸಬರಮತಿ ಆಶ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ನಂತರ ಸಾಂಬಾ ಜಿ, ಜಮ್ಮು ಮತ್ತು ಕಾಶ್ಮೀರ, ಬೆಂಗಳೂರು, ಪುಣೆ, ಭುವನೇಶ್ವರ, ಮೊಯಿರಾಂಗ್ ಮತ್ತು ಪಾಟ್ನಾ ಸೇರಿದಂತೆ ೩೭ ಕಡೆಗಳಲ್ಲಿ ರಾಜ್ಯಮಟ್ಟದ ಪ್ರದರ್ಶನಗಳು ನಡೆಯಲಿವೆ. ಈ ಪ್ರದರ್ಶನಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಹೆಗ್ಗುರುತುಗಳು, ಅಸಹಕಾರ ಚಳವಳಿ, ಕಾನೂನು ಅಸಹಕಾರ, ಕ್ವಿಟ್ ಇಂಡಿಯಾ ಚಳವಳಿ, ದಂಡಿ ಮಾರ್ಚ್, ಮಹಾತ್ಮ ಗಾಂಧಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ಪಟೇಲ್ ಸೇರಿದಂತೆ ದೇಶಕ್ಕಾಗಿ ತ್ಯಾಗ ಮಾಡಿದವರ ವಿಚಾರಗಳನ್ನು ಪ್ರದರ್ಶಿಸ ಲಾಗುವುದು.

ದೇಶವು ಸ್ವಾತಂತ್ರ್ಯಗಳಿಸಿದ ಮಹತ್ವದ ಕ್ಷಣಗಳ ಪುನರ್‌ಮನನಕ್ಕೆ ಹಾಗೂ ಇಂದಿನ ಪೀಳಿಗೆಗೆ ಸ್ವಾತಂತ್ರ್ಯದ ಮಹತ್ವ ಪರಿಚಯಿಸುವಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಉತ್ತಮ ಕಾರ್ಯಕ್ರಮ. ಇದೇ ಮಾದರಿಯಲ್ಲಿ ರಾಜ್ಯ ಸರಕಾರಗಳೂ ಸ್ವಾತಂತ್ರ್ಯದ ಮಹತ್ವ ತಿಳಿಸುವ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ಅಮೃತ ಮಹೋತ್ಸವವನ್ನು ಸಾರ್ಥಕ ಪಡಿಸಬೇಕಿದೆ.