Thursday, 12th December 2024

ಸ್ವೇಚ್ಛೆಗೆ ಕಡಿವಾಣ ಬೀಳಲಿ

ಬೆಂಗಳೂರು ಮಹಾನಗರಿ ಸೇರಿದಂತೆ ರಾಜ್ಯದ ವಿವಿಧೆಡೆ ತಾಪಮಾನ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಜನ- ಜಾನುವಾರುಗಳು, ಪಕ್ಷಿಗಳು ನೀರಿಗಾಗಿ ಪರದಾಡುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಇದು ಸಾಲದೆಂಬಂತೆ, ಹಾವುಗಳು ಬಿಸಿಲ ಬೇಗೆ ತಾಳಲಾಗದೆ ಬಿಲದಿಂದ ಹೊರಬಂದು ತಂಪಾದ ಜಾಗ ಹುಡುಕಿಕೊಂಡು ಜನವಾಸದ ನೆಲೆಗಳಿಗೆ ದಾಂಗುಡಿಯಿಡುತ್ತಿರುವುದು ವರದಿಯಾಗಿದೆ.

ಇದು ನಿಜಕ್ಕೂ ಆತಂಕದ ಸಂಗತಿಯಾಗಿದ್ದರೂ, ಇಂಥದೊಂದು ಪರಿಸ್ಥಿತಿ ಉದ್ಭವವಾಗಿರುವುದಕ್ಕೆ ಕಾರಣವೇನು ಎಂದು ಪ್ರಜ್ಞಾವಂತರು ಆತ್ಮಾವ ಲೋಕನ ಮಾಡಿಕೊಳ್ಳಬೇಕಾಗಿದೆ. ಹುಲಿ-ಚಿರತೆಗಳಂಥ ಕ್ರೂರಮೃಗಗಳು, ಆನೆಗಳು ಅರಣ್ಯ ಪ್ರದೇಶದಿಂದ ಹೊರಬಂದು ಸನಿಹದ ಊರುಗಳ ಮೇಲೆ ದಾಳಿಯಿಟ್ಟಿದ್ದು ಕೆಲ ತಿಂಗಳ ಹಿಂದೆ ವರದಿಯಾಗಿತ್ತು. ಇದು ಮನುಷ್ಯನ ಸ್ವೇಚ್ಛಾಚಾರ ಮತ್ತು ದುರಾಸೆಯ ಫಲಶ್ರುತಿಯಲ್ಲದೆ ಮತ್ತೇನಲ್ಲ. ಅಭಿವೃದ್ಧಿ ಚಟುವಟಿಕೆಗಳು ಮತ್ತು ನಗರೀಕರಣದ ಹುಕಿಗೆ ಬಿದ್ದು ಜನರು ಮನ ಬಂದಂತೆ ಕಾಡುಗಳನ್ನು ಕಡಿದ ಅಥವಾ ಒತ್ತುವರಿ ಮಾಡಿಕೊಂಡ ಫಲವಾಗಿ ವನ್ಯಜೀವಿಗಳ ಆವಾಸಸ್ಥಾನಕ್ಕೆ ಸಹಜವಾಗೇ ಧಕ್ಕೆಯಾಗಿ ಅವು ಹೀಗೆ ದಾಳಿ ಮಾಡುವಂತಾಗಿದೆ ಎಂಬುದೀಗ ಜಗಜ್ಜಾಹೀರು.

ಹಾವುಗಳು ನಮ್ಮ ನೆಲೆಯಿಂದ ಹೊರಬಂದು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವುದಕ್ಕೂ ಬಹುತೇಕ ಇದೇ ಕಾರಣ. ಇನ್ನು, ಊರೂರುಗಳಲ್ಲಿ ಮತ್ತು ಅರಣ್ಯಗಳಲ್ಲಿ ಎಗ್ಗಿಲ್ಲದೆ ಮರಗಳನ್ನು ಕಡಿಯುತ್ತಿರುವುದರಿಂದಾಗಿ, ಸಕಾಲದಲ್ಲಿ ಬರಬೇಕಾದ ಮಳೆಗೆ ಸಂಚಕಾರ ಒದಗಿದೆ. ಕಳೆದ ವರ್ಷದಲ್ಲಿ ಸರಿಯಾಗಿ ಮಳೆಯಾಗದ ಕಾರಣಕ್ಕೆ ಈಗ ರಾಜ್ಯದೆಲ್ಲೆಡೆ ನೀರಿಗೆ ಹಾಹಾಕಾರ ಎದ್ದಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಮನುಷ್ಯ ತನ್ನ ಸ್ವಾರ್ಥಪರ ಚಿಂತನೆಗೆ ತಿಲಾಂಜಲಿಯಿತ್ತು ಪರಿಸರ ಸಂರಕ್ಷಣೆಯೆಡೆಗೆ ಗಮನ ಹರಿಸಿದಲ್ಲಿ ಇಂಥ ಅಪಸವ್ಯಗಳು ಘಟಿಸುವುದಿಲ್ಲ.

ಆದರೆ ಆ ಕ್ಷಣದ ಲಾಭಗಳಿಕೆ ಯೆಡೆಗೇ ಮನಸ್ಸು ನೆಡುವ ಮನುಷ್ಯ, ದಿನಗಳೆದಂತೆ ದೂರದರ್ಶಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆ. ಪರಿಣಾಮವಾಗಿ, ದುಡ್ಡು ಕೊಟ್ಟರೂ ನೀರು ಸಿಗದಂಥ ಪರಿಸ್ಥಿತಿ ಸೃಷ್ಟಿಯಾಗಲು ಕಾರಣನಾಗಿದ್ದಾನೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಉಸಿರಾಡುವುದಕ್ಕೂ ತತ್ವಾರ ವಾಗುವ ಪರಿಸ್ಥಿತಿ ಒದಗಿದರೆ ಅಚ್ಚರಿಯಿಲ್ಲ. ಅದು ಒದಗುವುದಕ್ಕೆ ಮೊದಲೇ ಜಾಗೃತರಾಗುವುದು ಜಾಣರ ಲಕ್ಷಣ.