ಶನಿವಾರ, ಭಾನುವಾರ ಬಿಡುವಿನ ನಂತರ ಇಂದು (ಸೋಮವಾರ) ಮತ್ತೆ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದೆ. ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಏನಾದರೂ ಚರ್ಚೆಯಾಗುತ್ತದೆಯೇ ಎಂದು ಜನರು ಬೆರೆಗುಗಣ್ಣಿನಿಂದ ನೋಡುತ್ತಿದ್ದಾರೆ. ಆದರೆ ಪ್ರತಿಪಕ್ಷದ ಸದಸ್ಯರು ಮಾತ್ರ ಸುಗಮ ಕಲಾಪಕ್ಕೆ ಅನುಕೂಲ ಮಾಡಿಕೊಡುವ ಬಗ್ಗೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ರಾಜ್ಯ ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ. ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ, ರೈತರ ಸಮಸ್ಯೆ, ಕೋವಿಡ್ನಿಂದ ಉಂಟಾದ ಆರ್ಥಿಕ ದುಃಸ್ಥಿತಿ ಮುಂತಾದ ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಜನರು ಎದುರಿಸು ತ್ತಿರುವ ಸಂಕಷ್ಟಗಳ ಬಗ್ಗೆ ಪರಿಣಾಮಕಾರಿಯಾದ ಚರ್ಚೆ ನಡೆಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದಕ್ಕಾಗಿಯೇ ವಿಧಾನಮಂಡಲದ ಅಧಿವೇಶನವನ್ನು ಕರೆಯಲಾಗುತ್ತದೆ ಎಂಬುದನ್ನು ಜನಪ್ರತಿನಿಧಿಗಳು ಮರೆತು ಕಾಲಹರಣ ಮಾಡುತ್ತಿರುವುದು ಬೇಸರದ ಸಂಗತಿ.
ವರ್ಷಕ್ಕೆ ಕನಿಷ್ಠ 100 ದಿನಗಳಾದರೂ ವಿಧಾನಮಂಡಲ ಅಧಿವೇಶನ ನಡೆದರೆ ಪ್ರಜಾ ತಂತ್ರದ ಸೌಂದರ್ಯ ಇನ್ನಷ್ಟು ಹೊಳಪು ಪಡೆಯಬಹುದು. ಆದರೆ ಈಗ ಅಧಿ ವೇಶನವು 50 ದಿನ ಕೂಡ ನಡೆಯುವುದಿಲ್ಲ. ನಡೆದಷ್ಟು ದಿನವೂ ಇಂತಹ ಯಾವುದೋ ಒಂದು ವಿಷಯವನ್ನು ಇಟ್ಟುಕೊಂಡು ಗದ್ದಲ ಎಬ್ಬಿಸುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲು ಎನ್ನುವಂತಾಗಿದೆ. ಯಾವುದೇ ವಿಷಯದ ಬಗ್ಗೆ ಗಂಭೀರವಾದ ಚರ್ಚೆ ನಡೆದರೆ ಅಧಿವೇಶನಕ್ಕೆ ಒಂದು ಘನತೆ ಬರುತ್ತದೆ. ಅದು ಬಿಟ್ಟು ಕೋಲಾಹಲದ ಕಲಾಪವನ್ನು ಮುಗಿಸಿದರೆ ಅದು ಮತದಾರರಿಗೆ ಮಾಡುವ ದ್ರೋಹ. ಸದನದಲ್ಲಿ ಕೂಗಾಡಿದರೆ, ತೋಳ್ಬಲ ಪ್ರದರ್ಶಿಸಿದರೆ ಪ್ರಚಾರ ಸಿಗುತ್ತದೆ ಎಂದು ಕೆಲವರು ಭಾವಿಸಿದಂತಿದೆ. ಕೂಗುಮಾರಿತನ ಉತ್ತಮ ಸಂಸದೀಯ ಪಟುಗಳ ಲಕ್ಷಣವಲ್ಲ.
ಯಾವುದೇ ವಿಷಯದ ಬಗ್ಗೆ ಸೂಕ್ತ ಅಧ್ಯಯನ ಮಾಡಿಕೊಂಡು ಬಂದು ಮಾತನಾಡಿದರೆ ಸದನಕ್ಕೂ, ಸದಸ್ಯರಿಗೂ ಗೌರವ. ಮತ ಹಾಕಿ ಗೆಲ್ಲಿಸಿದ ಮತದಾರರ ಸದ್ಭಾವನೆಗೆ ಕೊಡುವ ಮಾನ್ಯತೆ. ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾ ಎಂಬ ಎಚ್ಚರಿಕೆ ಜನಪ್ರತಿನಿಧಿ ಗಳಿಗೆ ಬೇಕು. ವಿಧಾನಮಂಡಲವು ಜನ ಹಿತ ಕಾಯುವ ಶಾಸನಗಳನ್ನು ರೂಪಿಸುವ, ಆರೋಗ್ಯ ಪೂರ್ಣ ಚರ್ಚೆಯ ಮನೆಯಾಗಬೇಕೇ ವಿನಾ ಅಸಭ್ಯವಾಗಿ ಜಗಳವಾಡುವವರ ಜಾಗವಾಗಬಾರದು. ಹೀಗಾಗಿ ಅಧಿವೇಶನದ ಇನ್ನುಳಿದ ಐದು ದಿನಗಳನ್ನು ಎಲ್ಲ ಪಕ್ಷಗಳ ಸದಸ್ಯರೂ ಸದುಪಯೋಗಪಡಿಸಿಕೊಳ್ಳಬೇಕು.