ಭಾರೀ ಬೆಂಬಲದೊಂದಿಗೆ ಎರಡು ವರ್ಷಗಳ ಹಿಂದಷ್ಟೇ ಅಧಿಕಾರಕ್ಕೆ ಬಂದಿದ್ದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷ
ಅವರನ್ನು ಜನರು ಅಧಿಕಾರದಿಂದ ಅಕ್ಷರಶಃ ಹೊರದಬ್ಬಿದ್ದಾರೆ.
ಆದರೆ ಇನ್ನೂ ಅಧಿಕೃತವಾಗಿ ರಾಜೀನಾಮೆ ನೀಡದೇ ಇರುವುದರಿಂದ ಗೊಟಬಯ ಮತ್ತು ಎಲ್ಲ ರಾಜಕಾರಣಿಗಳ ಮೇಲೆಯೂ ಜನರು ಆಕ್ರೋಶ ಹೊರಹಾಕುವ ಸನ್ನಿವೇಶ ಸೃಷ್ಟಿಯಾಗಿದೆ. ಇದೀಗ ಗೊಟಬಯ ಅವರು ರಾಜೀನಾಮೆ ನೀಡಲೇಬೇಕು ಎಂಬುದೇ ಪ್ರತಿಭಟನಕಾರರ ಮುಖ್ಯ ಆಗ್ರಹವಾಗಿದೆ. ಇಷ್ಟರಲ್ಲೇ ಅವರು ರಾಜೀನಾಮೆಯನ್ನೂ ಕೊಡಬಹುದು. ಆದರೆ, ಅವರು ಹುದ್ದೆಯಿಂದ ಕೆಳಗಿಳಿದ ಮಾತ್ರಕ್ಕೆ ಆ ದೇಶವು ಎದುರಿಸು ತ್ತಿರುವ ಬಿಕ್ಕಟ್ಟು ಕೊನೆಯಾಗುವುದಿಲ್ಲ. ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳ ಲೇಬೇಕಾಗುತ್ತದೆ.
ವಿವಿಧ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯ ಮರೆತು ಜತೆಗೆ ಸೇರಿ ಕೆಲಸ ಮಾಡಬೇಕಿದೆ. ಎಲ್ಲ ಪಕ್ಷಗಳನ್ನೊಳ ಗೊಂಡ ಸರಕಾರವೊಂದು ರಚನೆ ಮಾಡಿದರೆ ವಿಶ್ವ ಸಮುದಾಯದ ನೆರವು ಕೇಳಬಹುದು. ಕನಿಷ್ಠ ಪಕ್ಷ ವಿಶ್ವದ ಹಣಕಾಸು ಸಂಸ್ಥೆಗಳ ಮುಂದೆ ತಮ್ಮ ದೇಶದ ಸಮಸ್ಯೆಗಳನ್ನು ಹೇಳಿ ತಾತ್ಕಾಲಿಕವಾಗಿ ನೆರವು ಪಡೆಯಲು ಸಾಧ್ಯ ವಾಗುತ್ತದೆ.
ಈಗಾಗಲೇ ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಜತೆಗೆ ಶ್ರೀಲಂಕಾ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಅದು ವಿಫಲವಾಗಿದೆ. ಮತ್ತೊಂದು ಸುತ್ತಿನ ಮಾತುಕತೆಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ. ಆದರೆ ಅದಕ್ಕೂ ಮುನ್ನ ಶ್ರೀಲಂಕಾ ದಲ್ಲಿನ ಜನಾಕ್ರೋಶ ವನ್ನು ನಿಯಂತ್ರಣದಲ್ಲಿ ತರಬೇಕಾದ ಅಗತ್ಯವಿದೆ. ಇಲ್ಲವಾದರೆ ಆ ದೇಶಕ್ಕೆ ನೆರವು ನೀಡಲು ಐಎಂಎಫ್ ಸೇರಿದಂತೆ ಬೇರೆ ಯಾವ ಸಂಸ್ಥೆ, ದೇಶಗಳೂ ಮುಂದೆ ಬರುವ ಸಾಧ್ಯತೆ ಕಡಿಮೆಯಾಗುತ್ತದೆ. ಆದ್ದರಿಂದ ರಾಜಪಕ್ಷ ಅವರು ರಾಜೀನಾಮೆ ನೀಡುವ ಮೂಲಕ ಜನಾಕ್ರೋಶವು ಎಲ್ಲ ರಾಜಕಾರಣಿಗಳ ಮೇಲೆ ತಿರುಗದಂತೆ ನೋಡಿಕೊಳ್ಳುವ ಮೂಲಕ ತಮ್ಮ ಸ್ಥಾನದ ಜವಾಬ್ದಾರಿಯನ್ನು ಮೆರೆಯಬೇಕಿದೆ.
ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಭೌಗೋಳಿಕ ರಾಜಕಾರಣದ ನೆಲೆಯಲ್ಲಿಯೇ ಶ್ರೀಲಂಕಾದ ಬಿಕ್ಕಟ್ಟನ್ನು
ನೋಡದೇ, ಭಾರತವೂ ಸೇರಿದಂತೆ ಜಗತ್ತಿನ ಇತರ ದೇಶಗಳು ಶ್ರೀಲಂಕಾಕ್ಕೆ ದೊಡ್ಡ ಪ್ರಮಾಣದಲ್ಲಿ ಮತ್ತು ಯಾವ ಷರತ್ತೂ ಇಲ್ಲದೆ ಆಹಾರ ಮತ್ತು ಇತರ ಬೆಂಬಲ ಒದಗಿಸಬೇಕಿದೆ.