Saturday, 7th September 2024

ಮಾಲ್ ವಿರುದ್ದ ಕ್ರಮ ಸರಿಯಾದ ಹೆಜ್ಜೆ

ಬೆಂಗಳೂರಿನ ಜಿ.ಟಿ. ಮಾಲ್‌ನಲ್ಲಿ ಧೋತಿ ಧರಿಸಿ ಬಂದ ರೈತನೊಬ್ಬನಿಗೆ ಅಲ್ಲಿನ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ ಘಟನೆ ಈಗ ದೇಶಾದ್ಯಂತ ಚರ್ಚೆಯಾಗುತ್ತಿದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ನಮ್ಮ ಮಾಲ್‌ಗಳಲ್ಲಿ ದೇಶಿ ಸಂಸ್ಕೃತಿ, ಆಚಾರ, ವಿಚಾರ, ಉಡುಗೆ ತೊಡುಗೆಗಳ ಬಗ್ಗೆ ಯಾವ ರೀತಿಯ ತುಚ್ಛ ಭಾವನೆ ಇದೆ ಎನ್ನು ವುದಕ್ಕೆ ಈ ಘಟನೆ ಸಾಕ್ಷಿ. ಹಾವೇರಿ ಜಿಯ ಅರೇಮಪುರ ಗ್ರಾಮದ ನಾಗರಾಜ್ ತಮ್ಮ ತಂದೆ ಫಕೀರಪ್ಪ ಅವರ ಜೊತೆ ಬೆಂಗಳೂರಿನ ಮಾಗಡಿ ರಸ್ತೆ ಯಲ್ಲಿರುವ ಜಿ.ಟಿ. ಮಾಲ್‌ಗೆ ಸಿನಿಮಾ ನೋಡಲು ಹೋದಾಗ ಈ ಘಟನೆ ನಡೆದಿದೆ.

ಭದ್ರತಾ ಸಿಬ್ಬಂದಿ ಮತ್ತು ಮ್ಯಾನೇಜರ್ ಸುಮಾರು ಅರ್ಧ ಗಂಟೆ ಕಾಲ ಸಿನಿಮಾ ವೀಕ್ಷಣೆಗೆ ಹೋಗಲು ಬಿಡದೇ ಗೇಟ್ ಬಳಿಯೇ ಕೂರಿಸಿ ಅವಮಾನ ಮಾಡಿ ದ್ದಾರೆ. ಮೇಲ್ನೋಟಕ್ಕೆ ಇದೊಂದು ಸಣ್ಣ ಘಟನೆಯಾದರೂ ನಾಗರಿಕರು, ಸುಸಂಸ್ಕೃತರೆನಿಸಿಕೊಂಡ ನಮಗೆ ದೇಶದ ಸಾಂಪ್ರದಾಯಿಕ ಉಡುಗೆಗಳ ಬಗ್ಗೆ ಯಾವ ರೀತಿಯ ಅವಜ್ಞೆ , ಅಸಡ್ಡೆ, ಮತ್ತು ಕೀಳು ಭಾವನೆ ಇದೆ ಎನ್ನುವುದಕ್ಕೆ ಇದು ನಿದರ್ಶನ. ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ಉಡುಪು ಧರಿಸಿ ಓಡಾಡಿದರೆ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಆದರೆ ತುಂಡುಡುಗೆ ತೊಟ್ಟವರನ್ನು ಫ್ಯಾಶನ್ ಪ್ರಿಯರೆಂದು ಸ್ವಾಗತಿ ಸುವ ಮಾಲ್‌ಗಳಿಗೆ ಸಾಂಪ್ರದಾಯಿಕ ಧೋತಿ ಉಟ್ಟು, ತಲೆಗೆ ರುಮಾಲು ಧರಿಸಿ ಬರುವುದು ಔಟ್ ಡೇಟೆಡ್ ಎನಿಸಿಕೊಳ್ಳುತ್ತದೆ.

ಉಡುಪು ಆಯಾ ದೇಶದ ಸಂಸ್ಕೃತಿ ಮತ್ತು ಪರಂಪರೆಯ ಭಾಗ. ಪಾಶ್ಚಾತ್ಯ ದೇಶಗಳಿಂದ ಹಿಡಿದು ಎಲ್ಲ ದೇಶಗಳಲ್ಲೂ ಅಲ್ಲಿನ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಬಗ್ಗೆ ವಿಶೇಷ ಗೌರವ, ಸಮ್ಮಾನಗಳಿವೆ. ಅದರಲ್ಲೂ ಧೋತಿ ಉತ್ತರಭಾರತ ಮತ್ತು ದಕ್ಷಿಣ ಭಾರತ ಎಂಬ ಭೇದವಿಲ್ಲದೆ ಎಲ್ಲ ಕಡೆ ರೈತರ ಸಾಂಪ್ರದಾಯಿಕ ಽರಿಸಾಗಿದೆ. ಕರ್ನಾಟಕದಲ್ಲಿ ಪಂಚೆ, ಕೇರಳದಲ್ಲಿ ಮುಂಡು, ಮಹಾರಾಷ್ಟ್ರದಲ್ಲಿ ಧೋರ್ತ, ಪಂಜಾಬಿನ ಲಾಚಾ ಮತ್ತು ಉತ್ತರ ಪ್ರದೇಶ ಮತ್ತು ಬಿಹಾರದ ಮರ್ದಾನಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅಲ್ಲಿನ ಪ್ರಾದೇಶಿಕ ಹೆಸರುಗಳಿಂದ ಕರೆಸಿ ಕೊಳ್ಳುವ ಧೋತಿಯನ್ನು ಗೌರವ ಮತ್ತು ಘನತೆಯ ಸಂಕೇತವೆಂದೂ ಪರಿಗಣಿ ಸಲಾಗುತ್ತದೆ. ಈ ಕಾರಣದಿಂದಲೇ ನಮ್ಮ ಮುಖ್ಯಮಂತ್ರಿ, ಮಾಜಿ ಮುಖ್ಯ ಮಂತ್ರಿಗಳಿಂದ ಹಿಡಿದು ಸ್ಟಾರ್ ನಟರ ತನಕ ಹಲವರು ಧೋತಿ, ಪಂಚೆ ಉಡುವುದನ್ನು ರೂಢಿಸಿಕೊಂಡಿದ್ದಾರೆ.

ಇದನ್ನು ತಿಳಿಯದ ಮಾಲ್‌ಗೆ ಏಳು ದಿನಗಳ ಕಾಲ ಬೀಗ ಜಡಿದು ಮಾಲೀಕರಿಗೆ ರಾಜ್ಯ ಸರಕಾರ ಪಾಠ ಕಲಿಸಲು ಹೊರಟಿರುವುದು ಸರಿಯಾದ ಕ್ರಮ. ಇದು ಎಲ್ಲರಿಗೂ ಪಾಠವಾಗಬೇಕು. ಉಡುಪು ಮಾನ ಮುಚ್ಚುವುದಕ್ಕೆ ಹೊರತು ನಮ್ಮ ಶ್ರೇಷ್ಠತೆ, ಕನಿಷ್ಠತೆಯ ಪ್ರತೀಕವಾಗಬಾರದು.

Leave a Reply

Your email address will not be published. Required fields are marked *

error: Content is protected !!