ಅತಿಥಿ ಉಪನ್ಯಾಸಕರ ಬೇಡಿಕೆಗೆ ಸ್ಪಂದಿಸಿ ರಾಜ್ಯದಲ್ಲಿರುವ ೪೩೦ ಸರಕಾರಿ ಪದವಿ ಕಾಲೇಜುಗಳಲ್ಲಿ ೧೦ ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಕಡಿಮೆ ಸಂಭಾವನೆ ಪಡೆದು, ಉದ್ಯೋಗ ಭದ್ರತೆಯಿಲ್ಲದ ಪರಿಸ್ಥಿತಿಯಲ್ಲಿಯೇ ಕನಿಷ್ಠ ಗೌರವಧನ ಪಡೆದು ಹತ್ತಾರು ವರ್ಷ ಕಾರ್ಯನಿರ್ವಹಿಸಿದ್ದಾರೆ. ಇಂದಲ್ಲ ನಾಳೆ ಉದ್ಯೋಗ ಕಾಯಂ ಆಗಬಹುದೆನ್ನುವ ನಿರೀಕ್ಷೆಯಲ್ಲಿ ೧೫-೨೦ ವರ್ಷಗಳನ್ನೂ ಕಳೆದವರಿದ್ದಾರೆ. ಅವರ ನಿರೀಕ್ಷೆ ಈವರೆಗೂ ಸಾಕಾರಗೊಂಡಿಲ್ಲ. ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಆಗಾಗ ಧರಣಿ, ಮುಷ್ಕರ ನಡೆಸಿದ್ದರಿಂದ ಸಣ್ಣಪುಟ್ಟ ಬೇಡಿಕೆಗಳು ಈಡೇರಿರುವುದು ಬಿಟ್ಟರೆ ಅತಿಥಿ ಉಪನ್ಯಾಸಕರ ಜೀವನ ಅತಂತ್ರವಾಗಿಯೇ ಮುಂದುವರಿದಿದೆ.
ಅಧಿಕಾರಕ್ಕೆ ಬಂದರೆ ಅತಿಥಿ ಉಪನ್ಯಾಸಕರಿಗೆ ಸೇವಾಭದ್ರತೆ ಒದಗಿಸುವುದಾಗಿ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಭರವಸೆ ನೀಡಿತ್ತು. ಆ ಭರವಸೆಯನ್ನು ಈಡೇರಿಸಿ ಎಂದು ಅತಿಥಿ ಉಪನ್ಯಾಸಕರು ಈಗ ಒತ್ತಾಯಿಸಿ ಅನಿರ್ದಿಷ್ಟಾವಽ ಮುಷ್ಕರ ಕೈಗೊಂಡಿದ್ದಾರೆ. ಮುಷ್ಕರ ಆರಂಭವಾಗಿ ತಿಂಗಳು ಕಳೆದಿದ್ದರೂ ಉಪನ್ಯಾಸಕರೊಂದಿಗೆ ತಾರ್ಕಿಕ ಒಪ್ಪಂದವೊಂದಕ್ಕೆ ಬರುವಲ್ಲಿ ಸರಕಾರ ಯಶಸ್ವಿಯಾಗಿಲ್ಲ. ರಾಜ್ಯದ ಬಹುತೇಕ ಸರಕಾರಿ ಪದವಿ ಕಾಲೇಜುಗಳು ಬಹುಮಟ್ಟಿಗೆ ಅತಿಥಿ ಉಪನ್ಯಾಸಕರನ್ನೇ ಅವಲಂಬಿಸಿದ್ದು, ಅವರಲ್ಲಿ ಬಹುತೇಕರು ತರಗತಿಗಳನ್ನು ಬಹಿಷ್ಕರಿಸಿ ಹೋರಾಟದಲ್ಲಿ ತೊಡಗಿರುವುದರಿಂದಾಗಿ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ, ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪರೀಕ್ಷೆಗಳು ಸನ್ನಿಹಿತವಾಗಿರುವ ಸಂದರ್ಭದಲ್ಲಿ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯದೆ ವಿದ್ಯಾರ್ಥಿಗಳು ಒತ್ತಡ ಅನುಭವಿಸಬೇಕಾಗಿದೆ. ಪದವಿ ಹಂತದಲ್ಲಿ ಪ್ರತಿಯೊಂದು ದಿನವೂ ಅಮೂಲ್ಯವಾಗಿರುವಾಗ ತಿಂಗಳಿಗೂ ಹೆಚ್ಚು ಕಾಲ ತರಗತಿಗಳು ನಡೆಯದಿರುವುದು ಶೈಕ್ಷಣಿಕ ಹಿತದೃಷ್ಟಿಯಿಂದ ಒಳ್ಳೆಯದಲ್ಲ. ಇದರಿಂದಾಗಿ ಉನ್ನತ ಶಿಕ್ಷಣದ ಗುಣಮಟ್ಟ ಕುಸಿಯುತ್ತದೆ. ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಬಗ್ಗೆ ಸರಕಾರ ಇನ್ನಾದರೂ ತನ್ನ ನಿರ್ಲಕ್ಷ್ಯ ಧೋರಣೆಯಿಂದ ಹೊರಬರಬೇಕು.
ಸೇವಾಭದ್ರತೆಯಿಲ್ಲದ ಸ್ಥಿತಿಯಲ್ಲಿ ಉಪನ್ಯಾಸಕರಿಂದ ಪರಿಣಾಮಕಾರಿ ಬೋಧನೆ ಸಾಧ್ಯವಿಲ್ಲ ಹಾಗೂ ಅದರ ಪರಿಣಾಮ ವಿದ್ಯಾರ್ಥಿಗಳ ಮೇಲೂ ಆಗುತ್ತದೆ ಎನ್ನುವುದನ್ನು ಸರಕಾರ ಗಮನದಲ್ಲಿಟ್ಟುಕೊಳ್ಳಬೇಕು. ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವ ಸಾಧ್ಯತೆಗಳನ್ನು ಪರಿಶೀಲಿಸಬೇಕು. ವಿದ್ಯಾರ್ಥಿಗಳ ಹಿತರಕ್ಷಣೆಯನ್ನು ನಿರ್ಲಕ್ಷಿಸದೆ, ಆದ್ಯತೆಯ ವಿಷಯವಾಗಿ ಇದನ್ನು ಸರಕಾರ ಪರಿಗಣಿಸಬೇಕು.