ಕರೋನಾ ವೈರಸ್ಸಿನ ಕಾಟ ಮುಗಿಯಿತು ಎಂದು ನಿಟ್ಟುಸಿರು ಬಿಡುವ ಹೊತ್ತಿಗೆ ಇತ್ತೀಚೆಗೆ ಎಚ್೩ಎನ್೨ ಇನ್ ಫ್ಲುಯೆಂಜಾ ಹಾವಳಿ ಶುರುವಾಗಿದೆ. ದೇಶಾದ್ಯಂತ ಒಂದು ತಿಂಗಳಿನಿಂದ ನೂರಾರು ಪ್ರಕರಣಗಳು ದಾಖಲಾಗಿವೆ.
ರಾಜ್ಯದಲ್ಲೂ ಸೋಕಿನ ಪ್ರಕರಣಗಳು ದಾಖಲಾಗಿರುವುದು ಗಮನಾರ್ಹ ಸಂಗತಿ. ಜತೆಜತೆಗೇ ಕಳೆದ ವರ್ಷದ ಇದೇ ವಧಿಯಂತೆ ಕರೋನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲೂ ಏರಿಕೆಯಾ ಗುತ್ತದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ ಎಚ್೩ಎನ್೨ ಜ್ವರಕ್ಕೆ ಕಾರಣವಾಗಬಲ್ಲ ಒಂದು ವೈರಾಣು.
ಇದರ ಒಂದು ಉಪ ರೂಪಾಂತರಿ ಅಪಾಯಕಾರಿಯಾಗಿದ್ದು ರೋಗಿಯು ಆಸ್ಪತ್ರೆಗೆ ದಾಖಲಾಗ ಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತದೆ ಎಂಬುದು ಕಾಳಜಿಗೆ ಕಾರಣ ವಾದ ವಿಷಯ. ಪ್ರತಿ ವರ್ಷ ಇಂತಹ ವೈರಸ್ಸಿನ ಕಾಟದಿಂದ ಜನರು ಸಮಸ್ಯೆ ಎದುರಿಸುತ್ತಾರೆ. ಆದರೆ ಈ ಬಾರಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಾಸ್ಕನ್ನು ಧರಿಸುವುದು, ಜನಸಂದಣಿಯನ್ನು ತಡೆಗಟ್ಟುವುದು ಮತ್ತು ನೈರ್ಮಲ್ಯ ಪಾಲನೆಯಂತಹ ಕ್ರಮಗಳ ಮೂಲಕ ಇದರ ಹರಡುವಿಕೆಯನ್ನು ತಡೆಯ ಬಹುದು ಎಂಬುದು ವೈರಾಣು ತಜ್ಞರ ಅಭಿಮತ.
ತಜ್ಞರ ಪ್ರಕಾರ ಕೋವಿಡ್-೧೯ ಮತ್ತು – ಸೋಂಕುಗಳೆರಡೂ ಬೇರೆ ಬೇರೆ ಕುಟುಂಬದ ಸಾಂಕ್ರಾಮಿಕ ವೈರಸ್‌ಗಳಿಂದ ಉಂಟಾಗುತ್ತವೆ. ಈ ಎರಡೂ ಉಸಿರಾಟದ ಕಾಯಿಲೆಗಳು ಜನರಲ್ಲಿ ಹೆಚ್ಚು ಹೆಚ್ಚು ಹರಡುತ್ತವೆ. ಸೋಂಕಿತ ವ್ಯಕ್ತಿಯ ಕೆಮ್ಮು ಅಥವಾ ಸೀನಿನಿಂದ ಹೊರ ಹೊಮ್ಮುವ ಡ್ರಾಪ್ಲೆಟ್‌ಳಿಂದ (ಹನಿ), ಸೋಂಕಿತ ವ್ಯಕ್ತಿಗಳ ಕೈ ಸ್ಪರ್ಶ ಹಾಗೂ ಸೋಂಕಿತ ಸ್ಥಳದಿಂದ ಮತ್ತೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಹೀಗಾಗಿ ವೈಯಕ್ತಿಕ ಸ್ವಚ್ಛತೆ, ನಿಯಮಿತವಾಗಿ ಕೈಗಳನ್ನು ತೊಳೆಯುವುದು, ಹೆಚ್ಚು ಜನಜಂಗುಳಿ ಸೇರದಿರುವುದು, ದೈಹಿಕ ಅಂತರ ಪಾಲಿಸುವುದು, ಆದಷ್ಟು ಮಾಸ್ಕನ್ನು ಬಳಸುವುದು, ಕೈಗಳಿಂದ ಮುಖ ಹಾಗೂ ಮೂಗನ್ನು ಪದೇಪದೇ ಮುಟ್ಟಿಕೊಳ್ಳದಿರುವುದು, ಸೀನುವಾಗ ಹಾಗೂ ಕೆಮ್ಮುವಾಗ ಬಾಯಿ ಹಾಗೂ ಮೂಗನ್ನು ಬಟ್ಟೆಯಿಂದ ಮುಚ್ಚಿಕೊಳ್ಳುವಂಥ ಮುನ್ನೆಚ್ಚರಿಕೆ ಪಾಲಿಸುವುದು ಅತ್ಯಗತ್ಯ.
ಜ್ವರ ಹಾಗೂ ಮೈ ಕೈ ನೋವಿದ್ದಾಗ ಸ್ವಯಂ ವೈದ್ಯ ಮಾಡದೇ ವೈದ್ಯರನ್ನು ತಪ್ಪದೇ ಕಾಣಬೇಕು. ೧೫ ವರ್ಷಕ್ಕಿಂತ ಚಿಕ್ಕವರು ಹಾಗೂ ೫೦ ವರ್ಷ ಮೇಲ್ಪಟ್ಟವರ ಬಗ್ಗೆ ಕಾಳಜಿ ಅಗತ್ಯ. ವೈಯಕ್ತಿಕ ಆರೋಗ್ಯ ಕಾಳಜಿಯು ಸಾಮಾಜಿಕ ಆರೋಗ್ಯದ ದೃಷ್ಟಿಯಿಂದ ಬಹು ಮುಖ್ಯ ಎಂಬುದು ನೆನಪಿರಲಿ.