ದೇಶದಲ್ಲಿ ಅಯೋಧ್ಯೆ ವಿವಾದ ಇತ್ಯರ್ಥಗೊಂಡಾಗ ಇಡೀ ದೇಶವೇ ಸಂಭ್ರಮಿಸಿತ್ತು. ಅಯೋಧ್ಯೆಯ ನೂತನ ರಾಮ
ಮಂದಿರ ನಿರ್ಮಾಣಗೊಂಡ ಬಳಿಕ ಹನುಮ ಜನ್ಮ ಭೂಮಿ ಅಭಿವೃದ್ಧಿಯನ್ನು ಕಾಣಬೇಕೆಂಬ ಅಪೇಕ್ಷೆ ರಾಜ್ಯದ ಜನತೆ ಯಾಗಿತ್ತು.
ಆದರೆ ಇದೀಗ ಹನುಮ ಜನ್ಮಭೂಮಿ ಹೊಸದೊಂದು ವಿವಾದ ಸ್ವರೂಪವಾಗಿ ಮಾರ್ಪಡುತ್ತಿರುವುದು ದುರಂತದ ಸಂಗತಿ. ಇದೀಗ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ)ವು ತಿರುಮಲದ ಅಕ್ಷಗಂಗಾ ಜಲಪಾತ ಸಮೀಪವಿರುವ ಜಪಲಿ ತೀರ್ಥವೇ ಹನುಮಂತನ ಹುಟ್ಟಿದ ಸ್ಥಳ ಎಂಬ ಹೇಳಿಕೆ ನೀಡಿರುವುದು ಇದೀಗ ಹನುಮ ಜನ್ಮಭೂಮಿಯ ಬಗ್ಗೆ ವಿವಾದ ಸೃಷ್ಟಿಗೊಳ್ಳಲು ಇರುವಂಥ ಕಾರಣ.
ಕರ್ನಾಟಕದ ಜನ ಹಂಪಿ ಸಮೀಪದ ಅಂಜನಾದ್ರಿ ಬೆಟ್ಟವನ್ನೇ ಹನುಮನ ಜನ್ಮಭೂಮಿ ಎಂದು ನಂಬಿ ಆರಾಧಿಸುತ್ತಿದ್ದಾರೆ. ಅಂಜನಾದ್ರಿ ಬೆಟ್ಟ ಹನುಮ ಜನಿಸಿದ ಪವಿತ್ರ ಸ್ಥಳ ಎಂಬುದು ಭಕ್ತರು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿರುವ ನಂಬಿಕೆ. ಇದೀಗ ಕರ್ನಾಟಕ – ಆಂಧ್ರ ರಾಜ್ಯಗಳ ನಡುವೆ ಇದೀಗ ಹನಮ ಜನ್ಮ ಸ್ಥಳದ ಬಗ್ಗೆ ವಿವಾದದ ಕಾವು ಹೆಚ್ಚುತ್ತಿದೆ.
ಮತ್ತೊಂದೆಡೆ ಅಂಜನಾದ್ರಿ ಪರ್ವತವಲ್ಲ, ಈಗೀನ ಗೋಕರ್ಣ ಪ್ರದೇಶ ಹನುಮನ ಜನ್ಮ ಸ್ಥಳ ಎಂಬ ಮತ್ತೊಂದು ವಾದವೂ ಮಹತ್ವ ಪಡೆದುಕೊಳ್ಳುತ್ತಿದೆ. ಕೆಲವರು ಜಾರ್ಖಂಡ್ ಎಂದರೆ, ಮತ್ತೆ ಕೆಲವರ ಪ್ರಕಾರ ಮಹಾರಾಷ್ಟ್ರದ ನಾಸಿಕ್ ಬಳಿ ಇರುವ ಅಂಜನೇರಿಯೇ ಹನುಮನ ಜನ್ಮಸ್ಥಳ ಎಂಬ ವಾದವೂ ಕೇಳಿಬರಲಾರಂಭಿಸಿದೆ. ಧಾರ್ಮಿಕ ಸ್ಥಳಗಳು ಹೀಗೆ ವಿವಾದದ ಸ್ವರೂಪ ಗಳಾಗುವುದು ಒಳ್ಳೆಯ ಬೆಳವಣಿಗೆಯಲ್ಲ.