ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ಎಂಬ ಯುವಕನ ಕೊಲೆಯಾಗಿದ್ದು ಅಮಾನವೀಯ ಘಟನೆ. ಈ ಘಟನೆಯನ್ನು ಗಮನಿಸಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು ಸ್ಪಷ್ಟವಾಗುತ್ತದೆ.
ಗೃಹ ಸಚಿವರ ಸ್ವಂತ ಜಿಲ್ಲೆಯ ಕೊಲೆ ನಡೆದಿರುವುದರಿಂದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕಾರ್ಯಬದ್ಧತೆಯನ್ನು ಜನರು ಪ್ರಶ್ನಿಸುವಂತಾಗಿದೆ. ಮತೀಯ ಕಾರಣಗಳಿಗಾಗಿ ರಾಜ್ಯದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆಗಳಾಗಿದ್ದು ಇದೇ ಮೊದಲಲ್ಲ. ಈ ಹಿಂದೆ ಅನೇಕರು ಇದೇ ರೀತಿ ಬಲಿಯಾಗಿದ್ದಾರೆ. ಇಂತಹ ದುಷ್ಕೃತ್ಯಗಳ ಹಿಂದೆ ಪೂರ್ವನಿಯೋಜಿತ ಪಿತೂರಿ, ಷಡ್ಯಂತ್ರ ಇರುವುದು ಸಾಬೀತಾ ಗಿದೆ. ಆದರೆ ಘಟನೆಯ ಹಿಂದಿನ ರೂವಾರಿಗಳಿಗೆ ಈವರೆಗೂ ಗಂಭೀರವಾದ ಶಿಕ್ಷೆ ಯಾಗಿಲ್ಲ.
ಈ ಹಿಂದೆ ಗೋರಕ್ಷಕ ಶಿವು ಉಪ್ಪಾರ ಹತ್ಯೆಯಾದಾಗಲೂ ಅಷ್ಟೇ ಸದ್ದು ಆಗಿತ್ತು. ಆದರೆ ನಂತರದ ದಿನಗಳಲ್ಲಿ ಎಲ್ಲ ಪ್ರಕರಣಗಳಂತೆ ಆ ಪ್ರಕರಣವೂ ತಣ್ಣಗಾಗಿತ್ತು. ಸಮಾಜದ ಶಾಂತಿ, ಸೌಹಾರ್ದತೆಗೆ ಭಂಗ ತರುವ ದುರುದ್ದೇಶದಿಂದ ನಡೆಯುತ್ತಿರುವ ಈ ಹತ್ಯೆ ಗಳ ಹಿಂದೆ ದೇಶ ವಿರೋಧಿ, ಹಿಂದೂ ವಿರೋಧಿ ಶಕ್ತಿಗಳ ಕುಮ್ಮಕ್ಕು, ಕೈವಾಡವಿದೆ. ಶಾಂತಿ, ಸಹಬಾಳ್ವೆ, ಸಹಿಷ್ಣುತೆಗೆ ಹೆಸರಾದ ಹಿಂದೂ ಸಮಾಜ ದಲ್ಲಿ ವಿಷಬೀಜ ಬಿತ್ತುತ್ತಿರುವ ಮತೀಯ ಮೂಲಭೂತವಾದಿಗಳಿಗೆ, ಅವರಿಗೆ ಬೆಂಬಲ ನೀಡುತ್ತಿರುವ ಕಾಣದ ಕೈಗಳಿಗೆ ಖಂಡಿತ ತಕ್ಕ ಶಾಸ್ತಿಯಾಗಬೇಕಿದೆ. ಹರ್ಷ ಕೊಲೆಗೆ ಕಾರಣರಾದವರನ್ನು ಪೊಲೀಸರು ಮೊದಲು ಬಂಧಿಸಬೇಕು, ಕಠಿಣ ಶಿಕ್ಷೆ ಜಾರಿಯಾಗುವಂತೆ ನೋಡಿಕೊಳ್ಳಬೇಕು. ನಂತರ ಇಂತಹ ಯುವಕರನ್ನು ಬಳಸಿಕೊಂಡು ಕೃತ್ಯ ಎಸಗುತ್ತಿರುವವರನ್ನು ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸ ಬೇಕು. ಇಲ್ಲವಾದಲ್ಲಿ ಈ ಹತ್ಯೆಗಳ ಸರಣಿ ಹೀಗೆಯೇ ಮುಂದುವರಿಯುತ್ತದೆ.
ಇಂತಹ ಕೊಲೆಗಳನ್ನು ರಾಜಕಾರಣಿಗಳು ಬಳಸಿಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದಂತೂ ಸತ್ಯ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ರಾಜ್ಯದಲ್ಲಿ ಇಂಥ ಘಟನೆಗಳು ನಡೆಯುತ್ತಿವೆ ಎನ್ನುವುದು ಸಾರ್ವಜನಿಕರ ಆರೋಪ.
ಅಭಿವೃದ್ಧಿ ವಿಚಾರಗಳನ್ನು ಇಟ್ಟುಕೊಂಡು ಜನರ ಬಳಿಗೆ ಹೋಗಬೇಕೇ ವಿನಾಃ ಇಂತಹ ಕೇವಲ ಭಾವನಾತ್ಮಕ ಅಂಶಗಳ ಮೂಲಕ ಹಿಂಸಾ ರಾಜಕಾರಣ ಮಾಡುವುದನ್ನು ರಾಜ್ಯದ ಜನರು ಎಂದಿಗೂ ಮನ್ನಿಸಿಲ್ಲ, ಮನ್ನಿಸುವುದೂ ಇಲ್ಲ ಎಂಬುವುದನ್ನು ರಾಜಕೀಯ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ.