Wednesday, 11th December 2024

ಎಸ್‌ಐಟಿ ವಿಶ್ವಾಸ ಉಳಿಸಿಕೊಳ್ಳಲಿ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇಷ್ಟು ಹೊತ್ತಿಗಾಗಲೇ ಎಸ್ ಐಟಿ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾಗಬೇಕಿದ್ದ ಪ್ರಜ್ವಲ್ ರೇವಣ್ಣ ಅವರು ವಿದೇಶದಿಂದ ಇನ್ನೂ ಮರಳಿಲ್ಲ. ಹೀಗಾಗಿ, ಗುರುವಾರದ ಬಳಿಕವೂ ಅವರು ಬಾರದಿದ್ದರೆ ವಿದೇಶಕ್ಕೆ ತೆರಳಿ ಅವರನ್ನು ಕರೆತರಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ಈ ಮಧ್ಯೆ ಸದರಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂಬ ಆಗ್ರಹ ಒಂದೆಡೆಯಿಂದ ಹೊಮ್ಮಿದ್ದರೆ, ಮತ್ತೊಂದೆಡೆ ‘ತನಿಖೆ ಸರಿಯಾದ ದಾರಿಯಲ್ಲಿ ಸಾಗುತ್ತಿದೆ, ಸಿಬಿಐಗೆ ವಹಿಸುವ ಅಗತ್ಯವಿಲ್ಲ’ ಎಂಬ ಸಮರ್ಥನೆ ರಾಜ್ಯದ ಗೃಹಸಚಿವರಿಂದ ಹೊಮ್ಮಿದೆ. ಒಟ್ಟಿನಲ್ಲಿ, ಎಲ್ಲವೂ ಅಂದುಕೊಂಡಂತೆಯೇ ನಡೆದು ಈ ಪ್ರಕರಣಕ್ಕೊಂದು ತಾರ್ಕಿಕ ಅಂತ್ಯ ಸಿಗುವಂತಾಗಲಿ ಎಂಬುದು ಸಹೃದಯಿಗಳ ಬಯಕೆ ಮತ್ತು ನಿರೀಕ್ಷೆ. ಆದರೆ, ಪೆನ್ ಡ್ರೈವ್ ಪ್ರಕರಣದ ಕೇಂದ್ರಭಾಗದ ಕುರಿತು ಚರ್ಚೆಯಲ್ಲಿ ತೊಡಗಿಸಿಕೊಳ್ಳಬೇಕಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ನಾಯಕರಿಬ್ಬರು ‘ಸದರಿ ಕುಕೃತ್ಯದಲ್ಲಿ ಪಾಲ್ಗೊಂಡವನಿ ಗಿಂತ ಅದನ್ನು ಬಯಲು ಮಾಡಿದವನದ್ದೇ ಹೆಚ್ಚು ತಪ್ಪು’ ಎಂಬ ಗ್ರಹಿಕೆಯ ಕುರಿತಾದ ವಾದದಲ್ಲಿ ತೊಡಗಿಸಿಕೊಳ್ಳುವಂತಾಗಿದೆ, ಪರಸ್ಪರರನ್ನು ಏಕವಚನದಲ್ಲಿ ನಿಂದಿಸುವ ಮಟ್ಟದವರೆಗೂ ಅದು ಮುಂದುವರಿದಿದೆ.

ಇದು ಎಷ್ಟರ ಮಟ್ಟಿಗೆ ಸರಿ? ಸದರಿ ಪ್ರಕರಣದಲ್ಲಿ ಸಂತ್ರಸ್ತೆಯರ ಚಹರೆ ಜಗಜ್ಜಾಹೀರಾಗುವಂತಾಗಿದ್ದೂ ಮತ್ತೊಂದು ನೋವಿನ ಸಂಗತಿಯೇ ಮತ್ತು
ಅದನ್ನು ಬಯಲುಮಾಡಿದವರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ವಾದವೂ ಸ್ವೀಕಾರಾರ್ಹವೇ. ಆದರೆ ಪ್ರಕರಣದ ಈ ಮಗ್ಗುಲಿಗೆ ಮಾತ್ರವೇ
ಹೆಚ್ಚಿನ ಒತ್ತುನೀಡಿದಲ್ಲಿ, ಅದು ಕೇಂದ್ರ ಗಮನದಿಂದ ದಿಕ್ಚ್ಯುತಿ ಆದಂತೆ ಆಗುವುದಿಲ್ಲವೇ? ಒಟ್ಟಾರೆ ಹೇಳುವುದಾದರೆ, ಘನಘೋರ ಎನ್ನಲಾಗಿರುವ
ಈ ಪ್ರಕರಣದ ಇತ್ಯರ್ಥದಲ್ಲಿ ಯಾವುದೇ ರಾಜಕೀಯದ ಮೇಲಾಟಗಳು ನಡೆಯದೆ ಸತ್ಯಸಂಗತಿ ಹೊರಬೀಳುವಂತಾಗಬೇಕು ಎಂಬುದು ಜನಸಾಮಾ
ನ್ಯರ ಆಗ್ರಹ.

ಅದಕ್ಕೆ ತಕ್ಕಂತೆ, ಎಸ್‌ಐಟಿ ಅಧಿಕಾರಿಗಳು ಯಾವ ರಾಗ- ದ್ವೇಷಗಳಿಗೂ ಇಂಬುಕೊಡದೆ ಈ ಪ್ರಕರಣವನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಜನರು ತಮ್ಮಲ್ಲಿ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕಿದೆ.