ಕಳೆದ ವರ್ಷವೆಲ್ಲಾ ಮಳೆರಾಯ ಕೈಕೊಟ್ಟು ಕೃಷಿಕರು ಕಂಗಾಲಾಗುವಂತಾಯಿತು. ಕೆರೆ-ಕಟ್ಟೆಗಳು ಒಣಗಿದವು, ಜೀವನದಿಗಳ ಹರಿವು ಗೋಳಾಟದಂತೆ ಕಾಣತೊಡಗಿತು. ಪರಿಣಾಮ ರಾಜ್ಯವನ್ನು ಭೀಕರ ಕ್ಷಾಮ ಆವರಿಸಿದೆ. ಇದಕ್ಕೆ ಪರಿಹಾರಾರ್ಥವಾಗಿ ಕೇಂದ್ರದಿಂದ ಪರಿಹಾರಧನ ಬಿಡುಗಡೆಯಾಗಿದ್ದರೂ, ‘ಆನೆ ಹೊಟ್ಟೆಗೆ ಮೂರು ಕಾಸಿನ ಮಜ್ಜಿಗೆ’ ಎಂಬ ಗಾದೆಮಾತಿನಂತೆ ಅದು ಯಾತಕ್ಕೂ ಸಾಕಾಗದಂತಿದೆ.
ಈ ಬಾಧೆ ಸಾಲದೆಂಬಂತೆ ಈಗ ಬಿರುಬಿಸಿಲಿನ ರುದ್ರನರ್ತನ ಪ್ರಾರಂಭವಾಗಿದ್ದು, ನಿರ್ದಿಷ್ಟವಾಗಿ ಬೆಂಗಳೂರಿನಲ್ಲಿ ಅದರ ತೀವ್ರತೆ ಹೆಚ್ಚಾಗಿದೆ. ಹವಾ ವಾನ ವೈಪರೀತ್ಯ, ಪರಿಸರ ಮಾಲಿನ್ಯ, ತಾಪಮಾನದಲ್ಲಿನ ಅತಿರೇಕದ ಹೆಚ್ಚಳ ಇವು ಜಾಗತಿಕ ನೆಲೆಯಲ್ಲಿ ಆತಂಕಕ್ಕೆ ಕಾರಣವಾಗಿರುವ ಸಂಗತಿಗಳಾಗಿರು ವುದು ದಿಟ. ಅಂತೆಯೇ, ನಗರದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಲೇ ಇರುವುದು ಕಳೆದ ಕೆಲವು ವರ್ಷಗಳಿಂದ ಕಾಣ ಬರುತ್ತಿರುವ ವಿದ್ಯಮಾನ; ಆದರೆ ಈ ಬಾರಿ ಅದು ೪೦ ಡಿಗ್ರಿ ಸೆಲ್ಸಿಯಸ್‌ನ ಹತ್ತಿರಕ್ಕೆ ಸಾಗಿರುವುದು ಜನರ ತಲ್ಲಣ ಮತ್ತಷ್ಟು ಹೆಚ್ಚುವುದಕ್ಕೆ ಕಾರಣವಾಗಿದೆ.
ಪ್ರಕೃತಿ ವಿಕೋಪದಿಂದಾಗಿ ಒದಗುವ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಹುಲುಮಾನವರಿಗೆ ಆಗದಿರಬಹುದು; ಆದರೆ ಕೆಲವಷ್ಟಕ್ಕೆ ಲಗಾಮು ಹಾಕುವುದು ನಮ್ಮ ಕೈಯಲ್ಲೇ ಇದೆ ಎಂಬುದನ್ನು ಈ ಸಂದರ್ಭದಲ್ಲಿ ಮರೆಯಬಾರದು. ನಿರ್ದಿಷ್ಟವಾಗಿ ಬೆಂಗಳೂರನ್ನೇ ಉದ್ದೇಶಿಸಿ ಹೇಳುವು
ದಾದರೆ, ಅಭಿವೃದ್ಧಿಯ ಹುಕಿಗೆ ಬಿದ್ದು ಕಟ್ಟಡ ನಿರ್ಮಾಣ ಕಾರ್ಯಕ್ಕೆ ಇನ್ನಿಲ್ಲದ ಒತ್ತಾಸೆ ನೀಡಿದ್ದರ ಫಲವಾಗಿ ಗಿಡಮರಗಳಿಗೆ ಸಂಚಕಾರ ಒದಗಿತು.
ಹೀಗಾಗಿ, ಒಂದು ಕಾಲಕ್ಕೆ ‘ಉದ್ಯಾನ ನಗರಿ’ ಎಂದು ಕರೆಸಿಕೊಂಡಿದ್ದ ಬೆಂಗಳೂರಿನಲ್ಲಿ, ಗಾಳಿ ಮತ್ತು ನೆರಳು ಸಿಗುವುದೂ ದುಸ್ತರ ಎನ್ನುವಂತಾಯಿತು.
ಗಿಡ-ಮರಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಕಾರಣ, ಜೀವಂತಿಕೆಯ ಸಂಕೇತವಾಗಿರುವ ಗುಬ್ಬಚ್ಚಿಗಳು ನಗರ ಪ್ರದೇಶದ ವ್ಯಾಪ್ತಿಯಲ್ಲಿ
ಕಾಣಬರುವುದು ವಿರಳವಾಗಿದೆ. ಜತೆಗೆ, ಬಿಸಿಲ ಬೇಗೆಯೂ ತಾರಕಕ್ಕೇರುವಂತಾಗಿದೆ. ಬಿರುಬಿಸಿಲಿನ ರುದ್ರನರ್ತನ ಹೀಗೆಯೇ ಮುಂದುವರಿದರೆ,
ಗುಬ್ಬಚ್ಚಿಗಳಿಗೆ ಒದಗಿದ ಪರಿಸ್ಥಿತಿಯೇ ನಮ್ಮಂಥವರಿಗೂ ಒದಗಿದರೆ ಅಚ್ಚರಿಯೇನಿಲ್ಲ. ಕಾಯಿಲೆ ಅಪ್ಪಳಿಸಿದ ನಂತರ ಚಿಕಿತ್ಸೆಗೆ ದೌಡಾಯಿಸುವ ಬದಲು,
ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಜಾಣರ ಲಕ್ಷಣ. ಇನ್ನಾದರೂ ಜಾಣರಾಗೋಣ.