Thursday, 12th December 2024

ಬಿಸಿಲು ಸಹನೀಯ ಮಾಡಲು ಸಾಧ್ಯ

ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ದೇಶದ ಬಹುತೇಕ ಕಡೆಗಳಲ್ಲಿ ಗರಿಷ್ಠ ತಾಪಮಾನವು ವಾಡಿಕೆಗಿಂತ ಹೆಚ್ಚಾಗಲಿದೆ. ವಿಶೇಷ ವಾಗಿ ಗುಜರಾತ್, ಮಹಾರಾಷ್ಟ್ರ, ಕರ್ನಾಟಕದ ಉತ್ತರ ಕರ್ನಾಟಕ, ಮಧ್ಯ ಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಸಿಕ್ಕಾ ಪಟ್ಟೆ ಸೆಕೆ ಇರಲಿದೆ ಎಂದು ತಜ್ಞರು ಹೇಳಿದ್ದು, ತೀವ್ರ ಆತಂಕ ಮೂಡಿಸಿದೆ. ರಾಜ್ಯದಲ್ಲಿ ಬಾಗಲಕೋಟೆ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಜಿಗಳಲ್ಲಿ ಮಾರ್ಚ್‌ನಿಂದಲೇ ಬಿಸಿಲಿನ ಝಳ ಹೆಚ್ಚಾಗಿದೆ. ಉಷ್ಣಾಂಶ ಹೆಚ್ಚಳದಿಂದ ಜಲ ಮೂಲಗಳು ಬರಿದಾಗುತ್ತಿವೆ.

ಜೀವನದಿಗಳು ನೀರಿಲ್ಲದೆ ಸೊರಗಿವೆ. ಬಿಸಿಲಿನಿಂದ ಕೆರೆಕಟ್ಟೆಗಳಲ್ಲಿ ನೀರು ಬರಿದಾಗುತ್ತಿದೆ. ಹಸಿರು ಮೇವು ಒಣಗಿ ಹೋಗಿರುವು ದರಿಂದ ಜಾನುವಾರುಗಳ ಗೋಳು ಹೇಳತೀರದಾಗಿದೆ. ನೀರು-ಮೇವಿಗಾಗಿ ಜಾನುವಾರುಗಳು ಪರದಾಡುತ್ತಿವೆ. ಹಸಿವು ಇಂಗಿಸಿ ಕೊಳ್ಳಲು ಪ್ಲಾಸ್ಟಿಕ್ ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ಜಾನುವಾರುಗಳು ತಿನ್ನುತ್ತಿವೆ. ನಾನಾ ರೋಗ-ರುಜಿನಗಳಿಗೆ
ತುತ್ತಾಗುತ್ತಿವೆ.

ಮಲೆನಾಡು ಭಾಗ ದಲ್ಲಿ ಕಾಡು ಪ್ರಾಣಿಗಳು ಕೂಡ ನೀರಿಗೆ ಪರಿತಪಿಸುವಂತಾಗಿದೆ. ದಾಹ ಇಂಗಿಸಿಕೊಳ್ಳಲು ಕಾಡಿನಂಚಿನಲ್ಲಿರುವ ಗ್ರಾಮಗಳಿಗೆ ಆಗಮಿಸುತ್ತಿವೆ. ಇದು ಅರಣ್ಯದಂಚಿನ ಗ್ರಾಮಸ್ಥರಲ್ಲಿ ಆತಂಕ ಉಂಟು ಮಾಡಿದೆ. ಈಗಾಗಲೇ ಹಲವೆಡೆ ಕುಡಿಯುವ ನೀರಿನ ಹಾಹಾಕಾರ ತಲೆದೋರಿದ್ದು, ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಹಲವು ಪ್ರದೇಶಗಳಲ್ಲಿ ನೀರಿನ ತತ್ವಾರ ಮತ್ತಷ್ಟು ಉಲ್ಬಣಿಸಲಿದೆ.

ನೆಲದ ಮೇಲೆ ಹಸಿರಿನ ಹೊದಿಕೆ ಶೀಘ್ರಗತಿಯಲ್ಲಿ ನಿರ್ನಾಮವಾಗುತ್ತಿರುವುದೇ ಇದಕ್ಕೆಲ್ಲ ಕಾರಣ. ಅರಿವಿದ್ದೋ ಇಲ್ಲದೆಯೋ ಮರುಭೂಮಿಯ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸುತ್ತಿದ್ದೇವೆ. ವಿeನ-ತಂತ್ರeನ ಅದೆಷ್ಟೇ ಮುಂದುವರಿದರೂ ಯಾರೂ ಒಂದು ತೊಟ್ಟು ನೀರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಆದರೆ ಜನಸಾಮಾನ್ಯರನ್ನು ಸಹಭಾಗಿಗಳನ್ನಾಗಿ ಮಾಡಿದರೆ ಪ್ರಕೃತಿ ನೀಡುವ ಹನಿಹನಿ ನೀರನ್ನೂ ಸರಿಯಾಗಿ ಬಳಸಿಕೊಂಡು ಮರುಭೂಮಿಯನ್ನು ತಡೆಗಟ್ಟಲು, ಬಿಸಿಲ ಬೇಗೆಯನ್ನು ಸಹನೀಯ ಮಾಡಲು ಸಾಧ್ಯವಿದೆ.

ಮಳೆಗಾಲದಲ್ಲಿ ಗಿಡ-ಮರಗಳನ್ನು ಬೆಳೆಸಿದರೆ ಬೇಸಿಗೆಗೆ ನಮಗೆ ನೆರಳು ಕೊಡುತ್ತವೆ ಎಂಬ ಅರಿವು ಬೆಳೆಸಿಕೊಳ್ಳಬೇಕಿದೆ. ಅಭಿವೃದ್ಧಿಯೆಂದರೆ ಬರೀ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟುವುದು ಮಾತ್ರವಲ್ಲ, ಮರ-ಗಿಡಗಳನ್ನು ಬೆಳೆಸುವುದು
ಕೂಡ ಅಭಿವೃದ್ಧಿ ಎಂಬ ಕಲ್ಪನೆ ಮೂಡಬೇಕಿದೆ.