Saturday, 7th September 2024

ಹೆದ್ದಾರಿ ದುರಂತಕ್ಕೆ ಅಧಿಕಾರಿಗಳು ಹೊಣೆ

ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಮಳೆ ಇದೇ ರೀತಿ ಮುಂದುವರಿದರೆ ಈ ವಾರ ದೊಳಗೆ ಪ್ರಮುಖ ಜಲಾಶಯಗಳು ತುಂಬುವ ನಿರೀಕ್ಷೆ ಇದೆ. ಈ ನಡುವೆ ಮಳೆಯ ಕಾರಣದಿಂದ ಅಲ್ಲಲ್ಲಿ ಅನಾಹುತಗಳು ಸಂಭವಿಸಿರುವ ವರದಿಗಳು ಬರುತ್ತಿವೆ. ಬಹುತೇಕ ಎಲ್ಲ ದುರಂತಗಳಿಗೆ ನಮ್ಮ ಎಡವಟ್ಟುಗಳೇ ಪ್ರಮುಖ ಕಾರಣವಾಗಿವೆ.

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಸಮೀಪದ ಶಿರೂರು ಗ್ರಾಮದ ಹೆದ್ದಾರಿಯಲ್ಲಿ ಮಂಗಳವಾರ ಭೂಕುಸಿತವುಂಟಾಗಿ ಹಲವು ಅಮಾಯಕ ಜೀವಗಳು
ಬಲಿಯಾಗಿವೆ. ಕಾರವಾರ-ಕುಮಟಾ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಸಂಚಾರ ಸ್ಥಗಿತಗೊಂಡಿದೆ. ಗುಡ್ಡ ಕುಸಿದ ಸ್ಥಳದಲ್ಲಿ ಹೊಟೇಲ್ ನಡೆಸುತ್ತಿದ್ದ ಕುಟುಂಬದ ಸದಸ್ಯರು ಮತ್ತು ಹೆದ್ದಾರಿಯಲ್ಲಿ ಕಾರಿನಲ್ಲಿ ಪಯಣಿಸುತ್ತಿದ್ದ ಐವರು ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಗುಡ್ಡ ಕುಸಿದ ರಭಸಕ್ಕೆ
ರಸ್ತೆಯಲ್ಲಿ ನಿಂತಿದ್ದ ಗ್ಯಾಸ್ ಟ್ಯಾಂಕರ್ ನದಿಗೆ ಉರುಳಿ, ಕೊಚ್ಚಿಕೊಂಡು ಹೋಗಿದೆ.

ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಬಗ್ಗೆ ಮಾಹಿತಿ ಬರಬೇಕಾಗಿದೆ. ಹಲವು ವಾಹನಗಳೂ ಮಣ್ಣಿನಡಿ ಸಿಲುಕಿಕೊಂಡಿವೆ. ಮೇಲ್ನೋಟಕ್ಕೆ ಇದು ಮಳೆ ಯಿಂದ ಸಂಭವಿಸಿದ ದುರಂತ ಎನಿಸಿದರೂ, ರಸ್ತೆ ಅಗಲೀಕರಣಕ್ಕೆ ಮಾಡಿದ ಕಾಮಗಾರಿಯಲ್ಲಿನ ದೋಷವೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಕಳೆದ ಒಂದು ದಶಕದಿಂದ ರಾಜ್ಯದ ಎಲ್ಲೆಡೆ ಹೆದ್ದಾರಿ ಅಗಲೀಕರಣ ನಡೆದಿದೆ. ಬಯಲು ಪ್ರದೇಶದಲ್ಲಿ ಅಗಲೀಕರಣ ಎಂದರೆ ರಸ್ತೆ ವಿಸ್ತರಣೆ. ಆದರೆ ವರ್ಷದ ಕನಿಷ್ಠ ನಾಲ್ಕೈದು ತಿಂಗಳು ಜಡಿ ಮಳೆ ಸುರಿಯುವ ಮಲೆನಾಡು, ಕರಾವಳಿಯಲ್ಲಿ ಅಲ್ಲಿನ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಕಾಮಗಾರಿ ನಡೆಸಬೇಕು.

ಜೆಸಿಬಿ ಮೂಲಕ ಮುಗಿಲೆತ್ತರದ ಬೆಟ್ಟವನ್ನು ಕಡಿದು ರಸ್ತೆ ಅಗಲ ಮಾಡುವುದು ಸುಲಭ. ಆದರೆ ಮಳೆಗಾಲದಲ್ಲಿ ಈ ಬೆಟ್ಟ ಕುಸಿಯದಂತೆ ನೋಡಿ ಕೊಳ್ಳುವ ಜವಾಬ್ದಾರಿಯೂ ಕಾಮಗಾರಿ ನಡೆಸುವ ಸಂಸ್ಥೆಗಿದೆ. ಇಂತಹ ಭಾಗಗಳಲ್ಲಿ ಕಾಮಗಾರಿ ಹೀಗೆಯೇ ಇರಬೇಕೆಂದು ಹೆದ್ದಾರಿ ಪ್ರಾಧಿಕಾರದ
ಅಧಿಕಾರಿಗಳು ಸ್ಥಾಯಿ ನಿಯಮಗಳನ್ನು ರೂಪಿಸಬೇಕು. ಅಂಕೋಲಾದ ಶಿರೂರು ಬಳಿ ಹೆದ್ದಾರಿ ವಿಸ್ತರಣೆಯ ಗುತ್ತಿಗೆ ಪಡೆದ ಸಂಸ್ಥೆ ಮತ್ತು ಕಾಮಗಾರಿ ಉಸ್ತುವಾರಿ ವಹಿಸಿದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಈ ದುರಂತಕ್ಕೆ ಹೊಣೆ ಮಾಡಬೇಕು. ಸಾರ್ವಜನಿಕ ಕಾಮಗಾರಿಗಳನ್ನು ನಡೆಸುವಾಗ ಭವಿಷ್ಯದ ಅಪಾಯವನ್ನು ಗ್ರಹಿಸಿ ಮುನ್ನೆಚ್ಚರಿಕೆ ವಹಿಸುವ ಮನೋಭಾವ ಇದ್ದರೆ ಇಂತಹ ಅನ್ಯಾಯದ ಸಾವುಗಳನ್ನು ತಪ್ಪಿಸಬಹುದು.

Leave a Reply

Your email address will not be published. Required fields are marked *

error: Content is protected !!