Thursday, 12th December 2024

ನ್ಯಾಯಾಲಯದ ತೀರ್ಪಿಗೆ ತಲೆಬಾಗಿ

ರಾಜ್ಯದಲ್ಲಿ ತೀವ್ರ ವಿವಾದಕ್ಕೀಡಾದ ಹಿಜಾಬ್ ವಿಚಾರವಾಗಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದಿರುವ ಕೋರ್ಟ್, ಶಾಲೆಗಳಲ್ಲಿ ಸಮವಸ್ತ್ರ ಧರಿಸುವುದನ್ನು ಎತ್ತಿ ಹಿಡಿದಿದೆ.

ಆದರೆ ಹೈಕೋರ್ಟ್ ತೀರ್ಪಿನ ಬಗ್ಗೆ ಒಂದು ಕೋಮಿನ ಕೆಲವೇ ಕೆಲವು ಜನರು ಅಪಸ್ವರ ಎತ್ತಿದ್ದಾರೆ. ಹೈಕೋರ್ಟ್ ತನ್ನ ತೀರ್ಪಿನಲ್ಲಿ ‘ಈ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿರುವ ಹಿಂದೆ ಕಾಣದ ಕೈಗಳು ಅಡಗಿವೆ’ ಎಂಬ ಸಂಶಯ ವ್ಯಕ್ತಪಡಿಸಿದ್ದನ್ನು ಗಮನಿಸಬೇಕಿದೆ. ಯಾರದ್ದೋ ಹಿತಾಸಕ್ತಿಗೆ ಇನ್ಯಾರನ್ನೋ ಬಲಿ ಕೊಡುವ ಹುನ್ನಾರ ಇದರ ಹಿಂದೆ ಇದೆ ಎಂಬುದು ಸ್ಪಷ್ಟ. ಹೀಗಾಗಿ ಮಕ್ಕಳ ಹಿತ ದೃಷ್ಟಿಯಿಂದ ಈ ವಿವಾದಕ್ಕೆ ತೆರೆ ಎಳೆದು ಎಲ್ಲರೂ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಿದೆ.

ಮಕ್ಕಳಿಗೆ ವಿದ್ಯೆಗಿಂತ ಮುಖ್ಯವಾದದ್ದು ಬೇರೊಂದಿಲ್ಲ. ಹೀಗಾಗಿ ಹೈಕೋರ್ಟ್ ತ್ರಿಸದಸ್ಯ ಪೀಠ ನೀಡಿರುವ ತೀರ್ಪನ್ನು ಅನುಷ್ಠಾನಗೊಳಿ ಸುವ ಸಂದರ್ಭದಲ್ಲಿ ಎಲ್ಲರೂ ಸಹಕಾರ ನೀಡಬೇಕಿದೆ. ಎಲ್ಲ ಸಮುದಾಯದ ನಾಯಕರು, ಪಾಲಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೀರ್ಪನ್ನು ಒಪ್ಪಿಕೊಂಡು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ, ತೀರ್ಪಿನ ಅನ್ವಯ ಶಿಕ್ಷಣ ನೀಡಲು ಸಹಕರಿಸಬೇಕಿದೆ. ಮಂಗಳವಾರ ರಾಜ್ಯದ ಹಲವೆಡೆ ವಿದ್ಯಾರ್ಥಿಗಳು ಪರೀಕ್ಷೆಗಳಿಂದ ಹೊರಗುಳಿದ ಪ್ರಕರಣಗಳು ವರದಿಯಾಗಿವೆ.

ಇಂಥ ಮೊಂಡುತನದ ವರ್ತನೆ ಬಿಟ್ಟು ವಿದ್ಯಾರ್ಥಿಗಳು ಪರೀಕ್ಷೆಗಳಿಗೆ, ತರಗತಿಗಳಿಗೆ ಹಾಜರಾಗಬೇಕು. ಯಾವುದೇ ಧರ್ಮದ
ಮಕ್ಕಳಾದರೂ ಶಿಕ್ಷಣಕ್ಕೆ ಆದ್ಯ ಗಮನ ಕೊಟ್ಟು, ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುವುದರ ಕಡೆಗೆ ಗಮನ ಕೊಡಬೇಕು. ಯಾವುದೇ ಧಾರ್ಮಿಕ ವಸ್ತ್ರಗಳತ್ತ ಅನಗತ್ಯ ಆದ್ಯತೆ ನೀಡುವ ಮೂಲಕ ಬದುಕಿನ ಸದವಕಾಶಗಳನ್ನು ವ್ಯರ್ಥ ಮಾಡಿಕೊಳ್ಳಬಾರದು. ಮಕ್ಕಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಲು ಎಲ್ಲ ಸಮುದಾಯದ ಮುಖಂಡರೂ ಚಿಂತಿಸಬೇಕಿದೆ.

ಇನ್ನು ಹಿಜಾಬ್ ಕುರಿತು ಹೈಕೋರ್ಟ್ ನೀಡಿರುವ ತೀರ್ಪಿಗೆ ವಿಜಯೋತ್ಸವ, ಸಂಭ್ರಮಾಚರಣೆ ಮಾಡದೇ, ತೀರ್ಪನ್ನು ಎಲ್ಲರೂ ಸಮ ಚಿತ್ತದಿಂದ ಸ್ವೀಕರಿಸಬೇಕಿದೆ. ಈ ತೀರ್ಪು ಯಾರ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ, ನ್ಯಾಯದ ಪರ ತೀರ್ಪು ಎಂಬುದನ್ನು ಅರಿಯ ಬೇಕಿದೆ. ಅನಗತ್ಯ ವಾಗಿ ಯಾವುದೇ ಕೋಮಿನ ಜನರನ್ನು ಪ್ರಚೋದಿಸುವ ಮೂಲಕ ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ, ಕೋಮು ಸೌಹಾರ್ದಕ್ಕೆ ಭಂಗ ತರಬಾರದು.