ರಾಜ್ಯದ ಕೆಲವೆಡೆ ಕಾಲೇಜುಗಳಲ್ಲಿ ಹಿಜಾಬ್-ಕೇಸರಿ ಶಾಲು ಸಂಘರ್ಷ ಮುಂದುವರಿದಿದ್ದು, ಕಲ್ಲು ತೂರಾಟದ ಹಂತಕ್ಕೂ ತಲುಪಿದೆ. ಈ ಹಿನ್ನೆಲೆಯಲ್ಲಿ ಸರಕಾರ ಕಾಲೇಜುಗಳಿಗೆ 3 ದಿನ ರಜೆ ಘೋಷಿಸಿದೆ.
ಕರಾವಳಿಯ ಒಂದು ಕಾಲೇಜಿನಲ್ಲಿ ಪ್ರಾರಂಭವಾದ ಈ ಕಿಡಿ ಇಡೀ ರಾಜ್ಯಾದ್ಯಂತ ಹಬ್ಬಲು ರಾಜಕಾರಣಿಗಳು, ಮತೀಯ ಸಂಘಟನೆಗಳು ನೇರ ಕಾರಣ. ಯಾವುದೋ ಘಟನೆಯನ್ನು ಮರೆಮಾಚಲು ಇನ್ಯಾವುದೋ ಘಟನೆ ಯನ್ನು ಮುನ್ನೆಲೆಗೆ ತರುವುದು ಈ ಹಿಂದಿನಿಂದಲೂ ರಾಜಕಾರಣಿಗಳು ವ್ಯವಸ್ಥಿತವಾಗಿಯೇ ಮಾಡಿದ್ದಾರೆ. ಅದರಲ್ಲಿ ಈ ಹಿಜಾಬ್-ಕೇಸರಿ ಶಾಲಿನ ಸಂಘರ್ಷವೂ ಸೇರಿಕೊಂಡಿದೆ. ವಿದ್ಯಾರ್ಥಿನಿಯರ ಶೈಕ್ಷಣಿಕ ಭವಿಷ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದವರಂತೆ ಎರಡೂ ಕಡೆಯ ರಾಜಕಾರಣಿಗಳು ಏಟಿಗೆ ಎದಿರೇಟು ಕೊಡುತ್ತಿದ್ದು, ಆ ಮೂಲಕ ವಿದ್ಯಾರ್ಥಿ ಗಳಲ್ಲಿ ಭಾವನೆ ಕೆರಳಿಸುತ್ತಿದ್ದಾರೆ.
ಪರೀಕ್ಷಾ ಸಮಯದಲ್ಲಿ ವಿದ್ಯಾರ್ಥಿಗಳು ಪಠ್ಯದ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಹಿಜಾಬ್ ಅಥವಾ ಕೇಸರಿ ಶಾಲಿಗೆ ಜೋತುಬೀಳುವ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ. ಕಾಲೇಜುಗಳಲ್ಲಿ ಧರ್ಮ ನಿರಪೇಕ್ಷತೆ ಜಾರಿಯಲ್ಲಿರಬೇಕೆಂದು ಅಪೇಕ್ಷಿಸುವುದು ಸ್ವಾಗತಾರ್ಹ. ಆದರೆ, ಸಮಾಜದಲ್ಲಿ ಧರ್ಮನಿರಪೇಕ್ಷತೆಯ ನಿಜವಾದ ರಾಯಭಾರಿಗಳಂತೆ ಕಾರ್ಯನಿರ್ವಹಿಸಬೇಕಾದವರು ರಾಜಕಾರಣಿಗಳು. ದುರದೃಷ್ಟವಶಾತ್ ಪ್ರಜಾಪ್ರತಿನಿಧಿಗಳಲ್ಲಿ ಬಹುತೇಕರು ಒಂದ ಒಂದು ಬಗೆಯಲ್ಲಿ ತಮ್ಮನ್ನು ನಿರ್ದಿಷ್ಟ ಕೋಮುಗಳಿಗೆ ಸೀಮಿತಗೊಳಿಸಿಕೊಂಡಿದ್ದಾರೆ. ಜನರ ಸಂಕಟ-ಸಮಸ್ಯೆ ಬಗ್ಗೆ ಮಾತನಾಡಬೇಕಾದವರು ಧರ್ಮಾಧಾರಿತ ವಿಷಯಗಳನ್ನು ತಮ್ಮ ಮೂಗಿನ ನೇರಕ್ಕೆ ತಕ್ಕಂತೆ ವ್ಯಾಖ್ಯಾನಿಸುತ್ತಿದ್ದಾರೆ. ಆ ಮೂಲಕ ಸಹೋದರ ಬಾಂಧವ್ಯ ಹೊಂದಿರುವ ಎರಡು ಸಮುದಾಯಗಳ ಮಧ್ಯೆ ಕಿಡಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ.
ವಿದ್ಯಾರ್ಥಿಗಳು ಒಟ್ಟಿಗೆ ಕಲಿಯುವುದಕ್ಕೆ ಅಗತ್ಯ ಪರಿಹಾರ ಕಂಡುಕೊಳ್ಳುವುದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು. ಹಿಜಾಬ್ ಎನ್ನುವುದು ಮುಸ್ಲಿಂ ಹೆಣ್ಣುಮಕ್ಕಳಿಗೆ ಧಾರ್ಮಿಕ ಹೇರಿಕೆಯೇ ಅಲ್ಲವೇ ಎನ್ನುವುದನ್ನು ಆ ಧರ್ಮಕ್ಕೆ ಹಾಗೂ ನ್ಯಾಯಾಲಯದ ವಿವೇಚನೆಗೆ ಬಿಡುವುದು ಎಲ್ಲರ ಹಿತದೃಷ್ಟಿಯಿಂದ ಒಳ್ಳೆಯದು. ವಿದ್ಯಾರ್ಥಿಗಳು ಧರ್ಮದ ವಿಷಬೀಜಗಳನ್ನು ತಲೆಯಲ್ಲಿ ಬಿತ್ತಿಕೊಳ್ಳದೆ, ತಂದೆ-ತಾಯಿಯ ಆಸೆ, ಆಕಾಂಕ್ಷೆ ಈಡೇರಿಸಲು ಯಾವ ನಿಟ್ಟಿನಲ್ಲಿ ಸಾಗಬೇಕೆಂಬುದರ ಕಡೆ ಗಮನಹರಿಸಬೇಕು.