Wednesday, 6th November 2024

ಐತಿಹಾಸಿಕ ಅಭಿಯಾನ

ಇಂದು ನಮ್ಮ ದೇಶದಲ್ಲಿ ಒಂದು ಬೃಹತ್ ಅಭಿಯಾನಕ್ಕೆ ಚಾಲನೆ ದೊರೆಯುತ್ತಿದೆ. ಕಳೆದ ಒಂದು ವರ್ಷದಿಂದ ಜಗತ್ತನ್ನು ಕಾಡಿದ ಕೋವಿಡ್ – 19 ಭಯವನ್ನು ದೂರಮಾಡುವ ಲಸಿಕೆ ನೀಡುವ ಬಹುಮುಖ್ಯ ಕಾರ್ಯಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ.

ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಕೋವಿಡ್ ವಾರಿಯರ್ಸ್ ಲಸಿಕೆಯನ್ನು ಪಡೆದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಎಲ್ಲರೂ ಲಸಿಕೆಯನ್ನು ಪಡೆಯಲಿದ್ದಾರೆ. ವಿಶ್ವದ ಅತಿ ದೊಡ್ಡ ಲಸಿಕೆ ನೀಡುವ ಕಾರ್ಯಕ್ರಮ ಇದು ಎಂದು ಪ್ರಚಾರ ಪಡೆದಿದ್ದು, ನಮ್ಮ ದೇಶದ ಜನಸಂಖ್ಯೆೆಯನ್ನು ಗಮನಿಸಿದರೆ, ಇಂತಹ ಹೆಗ್ಗಳಿಕೆ ಸಕಾರಣವಾದದ್ದೇ.

ನಮ್ಮ ದೇಶದ ಸುಮಾರು 136 ಕೋಟಿ ಜನರಿಗೆ ಲಸಿಕೆ ನೀಡುವ ಈ ಅಭಿಯಾನವು ಬಹು ದೊಡ್ಡ ಕಾರ್ಯ. ಜತೆಗೆ, ನಮ್ಮ ದೇಶದ ಭೂ ವೈವಿಧ್ಯತೆ, ಸಾಂಸ್ಕೃತಿಕ ಮತ್ತು ಮತ್ತು ಜನವೈವಿಧ್ಯತೆಯನ್ನು ಗಮನಿಸಿದರೆ ಈ ಕೆಲಸದಲ್ಲಿ ಕೆಲವು ಜಟಿಲ ಸಮಸ್ಯೆಗಳೂ ಅಡಗಿವೆ. ಈ ಮಹಾ ಅಭಿಯಾನಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಡುತ್ತಿರುವ ಶಿಸ್ತುಬದ್ಧ ತಯಾರಿಯನ್ನು ನೋಡಿ ದರೆ, ಇಂತಹ ಒಂದು ಕಾರ್ಯವನ್ನು ನಮ್ಮ ಕರೋನಾ ವಾರಿಯರ್ಸ್ ಯಶಸ್ವಿಯಾಗಿ ನಿರ್ವಹಿಸಬಲ್ಲರೆಂಬ ಆತ್ಮವಿಶ್ವಾಸವೂ ಎಲ್ಲರಲ್ಲಿ ಬೆಳೆದಿದೆ.

ಈ ನಡುವೆ ಮೊದಲ ಹಂತದ ಲಸಿಕಾ ಕಾರ್ಯಕ್ರಮಕ್ಕೆ ದೊರೆತ ಪ್ರಚಾರವನ್ನು ಕೆಲವು ಕುಹಕಿಗಳು ಮತ್ತು ವಿಚಾರವಾದಿಗಳು ಟೀಕಿಸುತ್ತಿರುವ ಸಂದರ್ಭಗಳೂ ಕಂಡುಬಂದಿವೆ. ಮೊದಲ ಹಂತದಲ್ಲೇ ಇಷ್ಟು ಪ್ರಚಾರವಾದರೆ, ಎಲ್ಲರಿಗೂ ಲಸಿಕೆ ನೀಡಿದಾಗ ಇನ್ನೆಷ್ಟು ಪ್ರಚಾರವಾಗಬಹುದು ಎಂದು ಪರೋಕ್ಷವಾಗಿ ಸರಕಾರವನ್ನು ವ್ಯಂಗ್ಯ ಮಾಡುತ್ತಿದ್ದಾರೆ. ಇದು ಸಲ್ಲದು. ದೇಶದ ಎಲ್ಲರೂ ಲಸಿಕೆ ಪಡೆಯುವಂತೆ ಪ್ರೋತ್ಸಾಹಿಸಬೇಕಾದುದು ಇಂದಿನ ಅವಶ್ಯಕತೆ. ಈ ಮಹಾ ಅಭಿಯಾನವು, ಪ್ರಚಾರಕ್ಕಿಂತ ಮಿಗಿಲಾಗಿ, ಜನರ ಆರೋಗ್ಯ ಕಾಪಾಡಲು ನಡೆಯುತ್ತಿರುವುದರಿಂದ, ಸಮಷ್ಠಿಿ ಹಿತವೇ ಇಲ್ಲಿ ಮುಖ್ಯ ಎನಿಸಿದೆ.