Saturday, 27th July 2024

ಬೆಂಗಳೂರಿನಲ್ಲೂ ಇವೆ ಅಪಾಯಕಾರಿ ಹೋರ್ಡಿಂಗ್

ಮುಂಬೈನಲ್ಲಿ ಕಳೆದ ಸೋಮವಾರ ಸುರಿದ ಭಾರೀ ಮಳೆಗೆ ಘಾಟ್ಕೊಪರ್‌ನ ಪೆಟ್ರೋಲ್ ಬಂಕ್ ಮೇಲೆ ಅಳವಡಿಸಿದ್ದ 120X120 ಅಡಿಯ ಬೃಹತ್ ಗಾತ್ರದ ಹೋರ್ಡಿಂಗ್ ಬಿದ್ದು, ಇದರ ಕೆಳಗೆ ಸಿಲುಕಿದ್ದವರ ಪೈಕಿ ೧೬ ಜನರು ಮೃತಪಟ್ಟಿದ್ದು, ೭೫ ಜನರು ಗಾಯಗೊಂಡಿದ್ದಾರೆ.

ಆ ಹೋರ್ಡಿಂಗ್‌ನ ತೆರವು ಕಾರ್ಯಾಚರಣೆ ಕಳೆದ ಮೂರು ದಿನಗಳಿಂದ ನಡೆದು ಗುರುವಾರ ಬೆಳಗ್ಗೆ ಅಂತ್ಯಗೊಂಡಿದೆ. ಇದು ಅಪರೂಪದ ಪ್ರಕರಣ ವಲ್ಲ. ಈ ಹಿಂದೆಯೂ ಇಂಥ ಘಟನೆಗಳು ಆಗಿವೆ. ಈ ಬೃಹತ್ ಜಾಹೀರಾತು ಫಲಕಗಳು ನಾಲ್ಕೈದು ಮಹಡಿ ಕಟ್ಟಡಗಳಷ್ಟು ಎತ್ತರವಾಗಿರುತ್ತವೆ. ವೈಜ್ಞಾನಿಕವಾಗಿ ಇದನ್ನು ನಿರ್ಮಿಸದೇ ಹೋದರೆ ಇವು ಬಿದ್ದಾಗ ಹಲವು ಜೀವಗಳಿಗೆ ಹಾನಿಯಾಗುವ ಸಂಭವ ಇದ್ದೇ ಇರುತ್ತದೆ. ಜತೆಗೆ ಅನಧಿಕೃತ
ಫ್ಲೆಕ್ಸ್, ಹೋರ್ಡಿಂಗ್‌ಗಳ ಕಾಟವೂ ಇದೆ. ಬೆಂಗಳೂರಿನಲ್ಲೂ ಇಂಥ ಜಾಹೀರಾತು ಫಲಕಗಳ ಹಾವಳಿ ಸಾಕಷ್ಟಿದೆ.

ಇವುಗಳಲ್ಲಿ ಅನಧಿಕೃತ ಎಷ್ಟು, ಅಧಿಕೃತ ಎಷ್ಟು ಎಂಬುದು ಲೆಕ್ಕಕ್ಕೆ ಸಿಗಲಾರದು. ಕಳೆದ ವರ್ಷ ಹೈಕೋರ್ಟ್, ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳ ಬಗ್ಗೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತ್ತು. ಪರಿಣಾಮ ನಗರವನ್ನು ತರಾತುರಿಯಿಂದ ಕ್ಲೀನ್ ಮಾಡಲಾಗಿತ್ತು. ಇದೀಗ ಬಿಬಿಎಂಪಿ ನೂತನ ಬೈಲಾ ತಂದಿದೆ. ಅದರಂತೆ ದೊಡ್ಡ ಹೋರ್ಡಿಂಗ್‌ಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ. ಹೋರ್ಡಿಂಗ್‌ನ ಗಾತ್ರವು ರಸ್ತೆಯ ಅಗಲ, ವೃತ್ತ ಅಥವಾ ಜಂಕ್ಷನ್ ಮತ್ತು ಪ್ರದೇಶವನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ೮೦ ರಿಂದ ೧೦೦ ಅಡಿ ಅಗಲದ ರಸ್ತೆಯಲ್ಲಿ ೧,೦೦೦ ಚದರ ಅಡಿ ಹೋರ್ಡಿಂಗ್ ಅನ್ನು ಪ್ರದರ್ಶಿಸಲು ಅನುಮತಿಸಲಾಗಿದೆ.

ಕನಿಷ್ಠ ಜಾಹೀರಾತು ಪ್ರದೇಶವು ೮೦೦ ಚದರ ಅಡಿಗಳಾಗಿದ್ದರೆ, ಗರಿಷ್ಠ ೩,೦೦೦ ಚದರ ಅಡಿ. ಗರಿಷ್ಠ ಎತ್ತರ ೭೫ ಅಡಿಗಳವರೆಗೂ ಹೋಗಬಹುದು. ಅಂದರೆ ಸುಮಾರು ಏಳು ಮಹಡಿ ಎತ್ತರ. ಇಂಥ ಒಂದು ಬೃಹತ್ ಫಲಕ ಗಾಳಿಗೆ ಬಿದ್ದರೆ ಎಂಥ ಅನಾಹುತ ಆದೀತು ಎಂಬುದನ್ನು ಊಹಿಸಬಹುದು.
ಅದರಡಿ ಓಡಾಡುವ ಜನರ ಸುರಕ್ಷತೆಯ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಲಾಗುತ್ತದೆ? ಇಂಥ ಅಪಘಾತದ ಸಂತ್ರಸ್ತರಿಗೆ ಗರಿಷ್ಠ ವಿಮೆ ನೀಡುವ ಕಾಯಿದೆ ಇರಬೇಕಲ್ಲವೆ? ಇದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ.

Leave a Reply

Your email address will not be published. Required fields are marked *

error: Content is protected !!