ತಾಂತ್ರಿಕವಾಗಿ ಹಾಗೂ ವೈಜ್ಞಾನಿಕವಾಗಿ ಯಾವುದೇ ದೇಶಗಳು ಎಷ್ಟೇ ಪ್ರಬಲತೆ ಸಾಧಿಸಿದರೂ ದಾನದ ವಿಚಾರದಲ್ಲಿ ಭಾರತ
ಮಾನವೀಯತೆ ನೆಲೆ ಹೊಂದಿರುವ ರಾಷ್ಟ್ರ. ಈ ಮಾತನ್ನು ದಾನಿಗಳು ಬಹಳಷ್ಟು ಬಾರಿ ಸಾಬೀತುಪಡಿಸಿದ್ದಾರೆ. ಶ್ರೀಮಂತಿಕೆ ಹೊಂದಿರು ವವರೆಲ್ಲ ದಾನಿಗಳಾಗಲು ಸಾಧ್ಯವಿಲ್ಲ. ಉತ್ತಮ ಮನೋಭಾವ ಉಳ್ಳವರು ಮಾತ್ರವೇ ದಾನಿಗಳಾಗಲು ಸಾಧ್ಯ. ದೇಶದಲ್ಲಿ ಪ್ರಾಕೃತಿಕ ವಿಕೋಪಗಳು, ಸಂಕಷ್ಟಗಳು ಒದಗಿದಾಗ ಬಹಳಷ್ಟು ದಾನಿಗಳು ನೆರವಾಗಿದ್ದಾರೆ.
ಭಾರತವು ಅನೇಕ ಉತ್ತಮ ಮನಸ್ಸಿನ ದಾನಿಗಳನ್ನು ಹೊಂದಿರುವುದು ಹೆಮ್ಮೆಯ ಸಂಗತಿ. ಕರೋನಾ ಸಂಕಷ್ಟ ಸಮಯದಲ್ಲಿಯೂ ಬಹಳಷ್ಟು ಜನರು ಆಹಾರ ಕಿಟ್‌ಗಳ ವಿತರಣೆ ಮೂಲಕ ಬಡಜನರ ನೆರವಿಗೆ ಧಾವಿಸಿದ್ದಾರೆ. ದಾನದಿಂದಾಗಿ ಭಾರತೀಯ ವ್ಯಕ್ತಿಯೊಬ್ಬರು ರಾಷ್ಟ್ರ ಮಾತ್ರವಲ್ಲದೇ ಜಾಗತಿಕವಾಗಿಯೂ ಮಹತ್ವ ಪಡೆದಿರುವುದು ದೇಶದ ಪಾಲಿಗೆ ಹೆಮ್ಮೆಯ ಸಂಗತಿ. ಇಂಥ ಗೌರವಕ್ಕೆ ಪಾತ್ರ ವಾಗಿರುವ ವ್ಯಕ್ತಿ ಟಾಟಾ ಗ್ರೂಪ್ ಸಂಸ್ಥೆಯ ಸಂಸ್ಥಾಪಕ ಜೆಮ್‌ಶೆಟ್ ಜಿ ನೆಸರ್‌ವಾನ್ ಜೀ ಟಾಟಾ. ಶತಮಾನ ಕಂಡ ಅಗ್ರಮಾನ್ಯ ದಾನಿಯಾಗಿ ಮಹತ್ವಪಡೆದಿರುವ ಇವರು ಭಾರತ ಮಾತೆಯ ಹೆಮ್ಮೆಯ ಪುತ್ರ ಎಂಬುದೇ ಸಂತಸದ ಸಂಗತಿ. ಇತ್ತೀಚೆಗೆ ಈಡೆಲ್ ಗಿವ್ ಹುರುನ್ ಎಂಬ ಸಂಸ್ಥೆಯು ಜಾಗತಿಕ ಮಟ್ಟದಲ್ಲಿನ ದಾನಿಗಳ ಪಟ್ಟಿಯನ್ನು ತಯಾರಿಸಿರುವ ಪಟ್ಟಿಯಲ್ಲಿ ಭಾರತದ ಜೆಮ್‌ಶೆಟ್ ಜಿ ಟಾಟಾ ಅಗ್ರಸ್ಥಾನ ಗಳಿಸಿದ್ದಾರೆ.
೧೮೯೨ರಿಂದ ಇಲ್ಲಿಯವರೆಗೆ ೭.೫ಲಕ್ಷ ಕೋಟಿ (೧೦೨ ಬಿಲಿಯನ್ ಡಾಲರ್) ದೇಣಿಗೆ ನೀಡಿದ್ದಾರೆ. ಜಾಗತಿಕವಾಗಿ ಬಹಳಷ್ಟು ಉದ್ಯಮಿ ಗಳು, ಶ್ರೀಮಂತರನ್ನು ಕಾಣಬಹುದಾದರೂ, ದಾನದ ವಿಚಾರದಲ್ಲಿ ಭಾರತದ ವ್ಯಕ್ತಿ ಅಗ್ರಸ್ಥಾನ ದಲ್ಲಿರುವುದು ಭಾರತೀಯರು ಹೊಂದಿ ರುವ ಮಾನವೀಯ ಮೌಲ್ಯಗಳ ಪ್ರತೀಕ ಎಂದು ಭಾವಿಸಬಹುದು. ಈ ಸಂಗತಿ ಪ್ರತಿಯೊಬ್ಬ ಭಾರತೀಯರಿಗೂ ಹೆಮ್ಮೆಯ ಸಂಗತಿ.