Monday, 16th September 2024

ಸೂಕ್ತ ತನಿಖೆ ಆಗಲಿ

ಉತ್ತರ ಪ್ರದೇಶದ ಹಾಥ್ರಸ್‌ನಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರ, ಹಲ್ಲೆ, ಅನಂತರ ಆಕೆಯ ಸಾವು ಇವೆಲ್ಲ ಇಡೀ ದೇಶವೇ
ತಲೆ ತಗ್ಗಿಸುವಂಥ ಘಟನೆ. ಆ ರಾಜ್ಯದಲ್ಲಿ ಈ ರೀತಿಯ ಪ್ರಕರಣಗಳು ಹೊಸದೇನೂ ಅಲ್ಲ. ಆದಿತ್ಯನಾಥ್ ಸರಕಾರ ಬಂದ ಬಳಿಕ ಅಲ್ಲಿ ಜಂಗಲ್ ರಾಜ್ ಕೊನೆಗೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಅಲ್ಲಿನ ಪರಿಸ್ಥಿತಿಯಲ್ಲಿ ಅಂಥ ಬದಲಾವಣೆಯೇನೂ ಕಂಡುಬರುತ್ತಿಲ್ಲ.

ಹಾಥ್ರಸ್ ಘಟನೆಯಲ್ಲೂ ಇದು ಢಾಳಾಗಿ ಎದ್ದುಕಂಡಿದೆ. ಸ್ಥಳಿಯ ಆಡಳಿತ ಪ್ರಕರಣವನ್ನು ನಿಭಾಯಿಸಿದ ರೀತಿ ಹಾಗೂ ಅದು  ಕೈಗೊಂಡ ಕ್ರಮಗಳು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮೃತಯುವತಿಯ ಅಂತ್ಯಸಂಸ್ಕಾರವನ್ನು ತರಾತುರಿಯಲ್ಲಿ ಮಾಡಿ ಮುಗಿಸುವ ಅವಶ್ಯಕತೆ ಏನಿತ್ತು? ಈ ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ ಹಾಗೂ ತಮ್ಮ ಬಾಯಿಯನ್ನೂ ಮುಚ್ಚಿಸುವ ಪ್ರಯತ್ನ ನಡೆದಿದೆ ಎಂದು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದಾರೆ. ತಮಗೆ ಬೆದರಿಕೆ ಇದೆ ಎಂದೂ  ಹೇಳಿದ್ದಾರೆ.

ಪ್ರಕರಣವನ್ನು ಸರಕಾರ ಮೊದಲು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂಬುದು ಸ್ಪಷ್ಟ. ಭಾರಿ ಗಲಾಟೆಯ ಬಳಿಕವಷ್ಟೇ ಈ ಘಟನೆಯ ತನಿಖೆಗೆ ವಿಶೇಷ ತನಿಖಾದಳ ರಚನೆಯನ್ನು ಘೋಷಿಸಲಾಯಿತು. ಅದೂ ಪ್ರಧಾನಿಯವರು ಮಧ್ಯಪ್ರವೇಶಿಸಿದ ಬಳಿಕ. ಇದೀಗ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ಆದರೆ ನ್ಯಾಯಾಧೀಶರ ಉಸ್ತುವಾರಿಯಲ್ಲಿಯೇ ತನಿಖೆ ನಡೆಯಬೇಕು ಎಂಬ ಕುಟುಂಬ ದವರ ಆಗ್ರಹದಲ್ಲಿ ಹುರುಳಿದೆ. ಏಕೆಂದರೆ ಸಿಬಿಐ ತನಿಖೆಯ ಮೇಲೂ ಈಗೀಗ ವಿಶ್ವಾಸ ಹಾರಿಹೋಗುವಂತಾಗಿದೆ.

ಇಷ್ಟೆಲ್ಲ ಆದಮೇಲಾದರೂ ಆದಿತ್ಯನಾಥ್ ಅವರ ಸರಕಾರ ಎಚ್ಚೆೆತ್ತುಕೊಳ್ಳಬೇಕು. ನತದೃಷ್ಟ ಯುವತಿಯ ಮೇಲೆ ಅತ್ಯಾಚಾರ ಹಾಗೂ ಅನಂತರ ಆಕೆಯ ಸಾವನ್ನಂತೂ ತಡೆಯುವುದು ಆಗಲಿಲ್ಲ. ಕಡೇಪಕ್ಷ ನಿಷ್ಪಕ್ಷಪಾತ ಹಾಗೂ ಪ್ರಾಮಾಣಿಕ ರೀತಿಯಲ್ಲಿ ತನಿಖೆ ನಡೆಸಬೇಕು. ಆರೋಪಿಗಳಿಗೆ ಸರಿಯಾದ ಶಿಕ್ಷೆ ದೊರೆತಾಗಲೇ ಕುಟುಮಬದವರಿಗೆ ನ್ಯಾಯ ಸಿಗುತ್ತದೆ. ಮೃತ ಯುವತಿಯ ಆತ್ಮಕ್ಕೆ ಶಾಂತಿ ಸಿಗುತ್ತದೆ. ಆದರೆ ಈ ಪ್ರಕರಣಕ್ಕೆ ರಾಜಕೀಯ, ಜಾತೀಯ ಬಣ್ಣ ಹಚ್ಚುವ ಪ್ರಯತ್ನಗಳು ನಡೆದಿರುವುದೂ ವಿಷಾದನೀಯ.

ನಿರ್ಭಯಾ ಪ್ರಕರಣಕ್ಕೂ ಇದಕ್ಕೂ ತುಲನೆ ಮಾಡಲಾಗುತ್ತದೆ. ಇದು ಸಲ್ಲ. ಹಾಗೆ ನೋಡಿದರೆ ನಿರ್ಭಯಾ ಪ್ರಕರಣವು ಮಹಿಳೆ ಯರ ಮೇಲಿನ ಅತ್ಯಾಚಾರದ ಗಂಭೀರ ಸಮಸ್ಯೆ ಕುರಿತು ಎಲ್ಲರ ಕಣ್ಣು ತೆರೆಸಿತು. ಅದಾದ ಬಳಿಕ ಕಾನೂನಿನಲ್ಲಿ ಸಾಕಷ್ಟು ಬದಲಾವಣೆ ತರಲಾಯಿತು, ಬಿಗಿಗೊಳಿಸಲಾಯಿತು. ಆದರೆ ಜಾರಿಯಲ್ಲಿ ಇನ್ನೂ ಅಂಥ ಗಂಭೀರತೆ ಕಂಡುಬಂದಿಲ್ಲ. ಅತ್ಯಾಚಾರ
ಯಾರ ಮೇಲಾದರೂ ಗಂಭೀರವಾದುದೇ. ತಪ್ಪಿತಸ್ಥರನ್ನು ಗುರುತಿಸಿ ಅವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಆಗ ಮಾತ್ರ ಜನರಲ್ಲಿ ಭಯಭೀತಿ ಮೂಡುವುದು ಸಾಧ್ಯ. ಆದ್ದರಿಂದ ಇಂಥ ಗಂಭಿರ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳದೆ ಸರಕಾರಕ್ಕೆ ಸೂಕ್ತ ಸಹಾಯ ಸಹಕಾರ ನೀಡಬೇಕು.

Leave a Reply

Your email address will not be published. Required fields are marked *