Thursday, 12th December 2024

ಮಹತ್ವದ ನಿರ್ಧಾರ

ಹಲವು ಮಹತ್ವದ ಯೋಜನೆಗಳನ್ನು ಘೋಷಿಸುವ ಮೂಲಕ ಜನ ಮನ್ನಣೆಗಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಇದೀಗ ಮತ್ತೊಂದು ಮಹತ್ವಕಾಂಕ್ಷೆ ಯೋಜನೆಯ ಚರ್ಚೆಗೆ ನಾಂದಿ ಹಾಡಿದ್ದಾರೆ.

‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಚರ್ಚೆ ನಡೆಯಬೇಕು ಎಂದು ಕರೆ ನೀಡಿದ್ದಾರೆ. ಕೇಂದ್ರ ಸರಕಾರದ ಮೂರು ಮಹತ್ವದ ನಿರ್ಧಾರಗಳಲ್ಲಿ ‘ಒನ್ ನೇಷನ್, ಒನ್ ರೇಷನ್ ಕಾರ್ಡ್’, ಸಮಗ್ರ ಮಾಹಿತಿ ಒಳಗೊಂಡ ಗುರುತಿನಚೀಟಿ ಹಾಗೂ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಸೇರಿವೆ. ಈ ಮೂರು ಯೋಜನೆಗಳು ಸಮರ್ಪಕವಾಗಿ ಜಾರಿಗೊಂಡಿದ್ದೇ ಆದಲ್ಲಿ ದೇಶದ ಚಿತ್ರಣವೇ ಬದಲಾಗಲಿದೆ.

ಆದರೆ ಇವುಗಳನ್ನು ಸಮರ್ಪಕವಾಗಿ ಜಾರಿಗೊಳಿಸಲು ಅನುಸರಿಸುವ ಮಾರ್ಗಸೂಚಿಗಳ ಮೇಲೆ ಯೋಜನೆಯ ಫಲಿತಾಂಶ ಅವಲಂಬಿತವಾಗುತ್ತದೆ. ಈಗಾಗಲೇ ೨೮ ರಾಜ್ಯಗಳ ೬೮.೮ ಕೋಟಿ ಫಲಾನುಭವಿಗಳನ್ನೊಳಗೊಂಡ ಒನ್ ನೇಷನ್ ಒನ್ ರೇಷನ್ ಕಾರ್ಡ್ ಜಾರಿಗೊಂಡಿದೆ. ಉಳಿದಂತೆ ಆಧಾರ್, ಬ್ಯಾಂಕ್ ಬುಕ್, ಚಾಲನಾ ಪರವಾನಗಿ, ಚುನಾವಣಾ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲಾತಿಗಳನ್ನೊಳಗೊಂಡ ಸಮಗ್ರ ದಾಖಲಾತಿ ಗುರುತಿನ ಚೀಟಿ ಜಾರಿಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಗಳು ಆರಂಭಗೊಂಡಿವೆ.

ಇದೀಗ ಒಂದು ರಾಷ್ಟ್ರ, ಒಂದು ಚುನಾವಣೆಯ ಮಾತು ಕೇಳಿಬರಲಾರಂಭಿಸಿದೆ. ಪ್ರತಿಯೊಬ್ಬ ಪ್ರಜೆಯ ಗುರುತಿಗಾಗಿ ಒಂದು ಚೀಟಿ, ಪಡಿತರ ಪಡೆಯಲು ಒಂದು ಗುರುತಿನ ಚೀಟಿ ಹಾಗೂ ಇಡೀ ದೇಶದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಸುವ ಯೋಚನೆ
ಉತ್ತಮವಾದದ್ದು. ಆದರೆ ಇಡೀ ದೇಶದಲ್ಲಿ ಒಂದೇ ಬಾರಿಗೆ ಚುನಾವಣೆ ನಡೆಸಲು ಇರುವ ಹಲವು ಅಡೆತಡೆಗಳ ಬಗ್ಗೆ ರೂಪುರೇಷೆ ಗಳನ್ನು ತಯಾರಿಸಿ, ಗೊಂದಲವಿಲ್ಲದಂತೆ ಜಾರಿಗೊಳಿಸಿದ್ದೆ ಆದರೆ, ಅದು ಸರಕಾರದ ಹೆಗ್ಗಳಿಕೆಗೆ ಸಾಕ್ಷಿ. ಒಟ್ಟಾರೆ ದೇಶದ ಅಭಿವೃದ್ಧಿ ನಿಟ್ಟಿನಲ್ಲಿ ಈ ಮೂರು ಯೋಚನೆಗಳು ಮಹತ್ವದ್ದಾಗಿವೆ.