Saturday, 14th December 2024

ಸ್ವಾತಂತ್ರ್ಯ ಸ್ವೇಚ್ಛವಾಗದಿರಲಿ

ಇಡೀ ದೇಶ ೭೫ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದೆ. ಅಮೃತ ಮಹೋತ್ಸವದ ನೆನಪಿಗಾಗಿ ರಾಜ್ಯ ಹಾಗೂ ಕೇಂದ್ರ ಸರಕಾರ ಹತ್ತು ಹಲವು ಯೋಜನೆಯನ್ನು ಘೋಷಿಸಿದೆ.

ಬ್ರಿಟಿಷರು ದೇಶ ಬಿಟ್ಟ ಬಳಿಕ, ದಾಸ್ಯದ ಸಂಕೋಲೆಯಿಂದ ಹೊರ ಬಂದ ಭಾರತದ ಪ್ರತಿಯೊಬ್ಬರಿಗೂ ಸ್ವತಂತ್ರ ವಾಗಿ ಜೀವಿಸುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಆದರೆ ಸ್ವತಂತ್ರ್ಯದ ಹೆಸರಿನಲ್ಲಿ ಇತ್ತೀಚಿನ ದಿನದಲ್ಲಿ ನಡೆಯುತ್ತಿರುವ ಕೆಲವು ಬೆಳವಣಿಗೆ ಕಾಣಿಸುತ್ತಿದೆ. ಸಂವಿಧಾನದಲ್ಲಿ ನೀಡಿರುವ ಸ್ವಾತಂತ್ರ್ಯವನ್ನು ಅನೇಕರು ಸ್ವೇಚ್ಛಾವನ್ನಾಗಿ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದೇಶದ ಬೆಳವಣಿಗೆಗೆ ಉತ್ತಮವಲ್ಲ.

ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ವಿರುದ್ಧವೇ ಮಾತನಾಡುವ, ವಾಕ್ ಸ್ವಾತಂತ್ರ್ಯದ ಹೆಸರಲ್ಲಿ ದೇಶ ಹಾಗೂ ಆಡಳಿತದ ವಿರುದ್ಧ ಮಾತನಾಡುವ ಪರಿಸ್ಥಿತಿ ಇತ್ತೀಚಿಗೆ ಹೆಚ್ಚಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಸ್ವಾತಂತ್ರ್ಯದ ಬಳಿಕ ಅದರಲ್ಲಿಯೂ ಕಳೆದೊಂದು ದಶಕದಿಂದ ಇಡೀ ದೇಶದಲ್ಲಿ ಸಿದ್ಧಾಂತದ ಹೆಸರಲ್ಲಿ, ಧರ್ಮ, ಜಾತಿಯ ಹೆಸರಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳು ನಿಜಕ್ಕೂ ಆಘಾತಕಾರಿ. ತಮ್ಮ ಧರ್ಮ, ಸಿದ್ಧಾಂತ, ಜಾತಿಯೇ ಹೆಚ್ಚು ಎಂದು ಸಾಬೀತು ಪಡಿಸಲು ಕೆಲವರು ಯಾವ ಹಂತಕ್ಕಾದರೂ ಇಳಿಯುತ್ತಿದ್ದಾರೆ.

ಪಂಥವನ್ನು ಆರಿಸಿಕೊಳ್ಳುವುದು ಪ್ರತಿಯೊಬ್ಬರ ಹಕ್ಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ ನಾವು ಒಪ್ಪಿಕೊಂಡ ಪಂಥವೇ ಸರಿ, ಇನ್ನೊಂದು ಬದಿ ಯಲ್ಲಿರುವುದು ತಪ್ಪು ಎನ್ನುವ ಧೋರಣೆ ದೇಶದ ಸರ್ವಾಂಗೀಣ ಬೆಳವಣಿಗೆಗೆ ಕುತ್ತು ತರುತ್ತದೆ. ನಾನು ನಂಬಿದ ಧರ್ಮ, ಸಿದ್ಧಾಂತ, ಪಂಥವೇ ಸರಿ, ಅದನ್ನೇ ಎಲ್ಲರೂ ಪಾಲಿಸಬೇಕು ಎಂದು ಇತರರ ಮೇಲೆ ಹೇರುವುದು ಸಹ ಸರ್ವಾಽಕಾರಿ ಧೋರಣೆ. ಆದ್ದರಿಂದ ೭೫ನೇ ಸ್ವಾತಂತ್ರ್ಯ ಮಹೋತ್ಸವವನ್ನು ಆಚರಿಸಿ ಕೊಂಡಿರುವ ಭಾರತ ಇನ್ನಾದರೂ, ದೇಶದ ಭದ್ರತೆ, ಏಕತೆಗೆ ಒಗ್ಗೂಡಬೇಕಿದೆ.