Thursday, 12th December 2024

ದೇಶದ ಹಿತವೇ ಸದ್ಯದ ತುರ್ತು

೧೮ನೇ ಲೋಕಸಭೆ ತನ್ನ ಮೊದಲ ಅಧಿವೇಶನದಲ್ಲಿಯೇ ೧೯೭೫ರ ತುರ್ತು ಪರಿಸ್ಥಿತಿ ಹೇರಿಕೆಯನ್ನು ಖಂಡಿಸಿ ನಿರ್ಣಯ ಅಂಗೀಕರಿಸಿದೆ. ಪ್ರಧಾನಿ ಇಂದಿರಾಗಾಂಧಿ ಅವರು ೨೧ ತಿಂಗಳ ಕಾಲ ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ, ಸರ್ವಾಧಿಕಾರದ ಆಡಳಿತ ನಡೆಸಿದ ದಿನಗಳನ್ನು ಯಾರೂ ಮರೆಯ ಲಾಗದು.

ಇದು ದೇಶದ ರಾಜಕೀಯ ಚರಿತ್ರೆಗೆ ನಿರ್ಣಾಯಕ ತಿರುವು ಕೊಟ್ಟ ಘಟನೆಯೂ ಹೌದು. ಈ ಅವಧಿಯಲ್ಲಿ ನಡೆದ ಆಡಳಿತದ ಅತಿರೇಕಗಳ ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ. ತುರ್ತು ಪರಿಸ್ಥಿತಿಯ ವಿರುದ್ಧ ನಡೆದ ಹೋರಾಟವೇ ೧೯೭೭ರಲ್ಲಿ ಮೊಟ್ಟ ಮೊದಲ ಕಾಂಗ್ರೆಸ್ಸೇತರ ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟಿತು. ಈ ಸರಕಾರ ತನ್ನದೇ ವೈರುಧ್ಯಗಳಿಂದ ಉರುಳಿದಾಗ ಜನರು ಎಮರ್ಜೆನ್ಸಿಯ ಅತಿರೇಕ ಗಳನ್ನು ಮರೆತು ಇಂದಿರಾ ಅವರನ್ನು ಮರು ಆಯ್ಕೆ ಮಾಡಿದ್ದೂ ಚರಿತ್ರೆಯಲ್ಲಿ ದಾಖಲಾದ ಅಂಶ.

ಈ ಬಳಿಕದ ೫೦ ವರ್ಷಗಳಲ್ಲಿ ದೇಶದ ರಾಜಕೀಯ ಸಾಕಷ್ಟು ಸ್ಥಿತ್ಯಂತರ ಗಳನ್ನು ಕಂಡಿದೆ. ದೇಶಕ್ಕೇ ತಾನೇ ಪರ‍್ಯಾಯ ಎಂದು ಮೆರೆಯುತ್ತಿದ್ದ ಕಾಂಗ್ರೆಸ್, ೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇವಲ ೪೪ ಸೀಟುಗಳಿಗೆ ಸೀಮಿತವಾಗಿದ್ದೂ ಉಲ್ಲೇಖನೀಯ. ಅಂದು ಕಾಂಗ್ರೆಸ್ ವಿರುದ್ದ ಹೋರಾಡಲು ಜನತಾ ಪರಿವಾರದೊಂದಿಗೆ ಕೈ ಜೋಡಿಸಿದ್ದ ಜನಸಂಘ, ಇಂದು ಬಿಜೆಪಿ ಹೆಸರಿನಲ್ಲಿ ರೂಪಾಂತರಗೊಂಡು ಆಡಳಿತಾರೂಢ ಪಕ್ಷ ವಾಗಿದೆ. ಅಂದಿನ ಜನತಾ ಪರಿವಾರದ ಹೆಚ್ಚಿನ ಸದಸ್ಯರು ಇಂದು ಕಾಂಗ್ರೆಸ್ ನೇತೃತ್ವದ ‘ಇಂಡಿಯ’ ಒಕ್ಕೂಟದಲ್ಲಿದ್ದಾರೆ. ಬಿಜೆಪಿ ಅಂದಿನ ದಿನಗಳನ್ನು ನೆನಪಿಸಿ, ಕಾಂಗ್ರೆಸ್‌ಗೆ ತಿರುಗೇಟು ಕೊಡುವ ಪ್ರಯತ್ನ ಮಾಡಿದರೆ, ಕೈ ಪಕ್ಷ ಇಂದಿನ ದಿನಗಳು ಅಘೋಷಿತ ತುರ್ತುಪರಿಸ್ಥಿತಿಯ ಕಾಲ ಎಂದು ಮಾರುತ್ತರ ನೀಡಿದೆ.

ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನಿಜ ವಾರಸುದಾರರು ಯಾರೆಂಬ ಬಗ್ಗೆ ಎರಡೂ ಪಕ್ಷಗಳ ನಡುವೆ ವಾಗ್ವಾದ ನಡೆಯುತ್ತಲೇ ಇದೆ. ಇದೆಲ್ಲದರ ನಡುವೆ ತುರ್ತುಪರಿಸ್ಥಿತಿಯ ವಿರುದ್ಧ ಹೋರಾಡಿ, ಕಷ್ಟ ನಷ್ಟ ಅನುಭವಿಸಿದ ಹಲವರು ಕಾಲ ಗರ್ಭ ಸೇರಿದ್ದಾರೆ. ಅಂದು ಹೋರಾಟದ ಕಲಿಗಳಾಗಿದ್ದ ಕೆಲವರು ಇಂದು ತಾವೇ ಸರ್ವಾಧಿಕಾರಿಗಳ ಪೋಷಾಕು ಧರಿಸಿದ್ದಾರೆ. ಇದೇನೇ ಇರಲಿ, ದೇಶಕ್ಕೆ ಸ್ವಾತಂತ್ರ್ಯದೊರೆತು ೩ ದಶಕಗಳಾಗುವ ಮುನ್ನವೇ ಪ್ರಜಾಪ್ರಭುತ್ವ ಕತ್ತಲೆಗೆ ಸರಿದಾಗ, ದೇಶವಾಸಿಗಳ ಹೃದಯದಲ್ಲಿದ್ದ ಪ್ರಜಾಸತ್ತೆಯ ಹಂಬಲಕ್ಕೆ ಕಿಚ್ಚು ಹಚ್ಚಿದ್ದು ತುರ್ತು ಪರಿಸ್ಥಿತಿ ಘೋಷಣೆ.

ದೇಶದ ಸಾಮಾನ್ಯ ಪ್ರಜೆಯಿಂದ ಹಿಡಿದು ಜಯಪ್ರಕಾಶ ನಾರಾಯಣರಂತಹ ನೇತಾರರ ತನಕ ಅಂದು ನಡೆಸಿದ ಹೋರಾಟ ೨ನೇ ಸ್ವಾತಂತ್ರ್ಯ ಹೋರಾಟ
ಕ್ಕಿಂತ ಕಡಿಮೆಯದ್ದೇನಾಗಿರಲಿಲ್ಲ. ಮುಂದೆಯೂ ಈ ಘಟನೆ ನಮಗೆ ಎಚ್ಚರಿಕೆಯ ಗಂಟೆಯಾಗಬೇಕು. ರಾಜಕೀಯ ಕೆಸರೆರಚಾಟಕ್ಕಿಂತ ದೇಶದ ಹಿತ ಎಲ್ಲ ಪಕ್ಷಗಳಿಗೂ ಮುಖ್ಯವಾಗಬೇಕು. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಪೂಜೆ ಗಿಂತ ಸಾಂಕ ಶಕ್ತಿ, ಸಾಮುದಾಯಿಕ ಶ್ರಮಕ್ಕೆ ಹೆಚ್ಚು ಬೆಲೆ. ಪ್ರಜಾತಂತ್ರದ ತೇರನ್ನು ಎಳೆಯುವಲ್ಲಿ ಭಾರತೀಯರಾದ ನಮಗೆಲ್ಲರಿಗೂ ಸಮಾನ ಪಾತ್ರವಿದೆ.