Tuesday, 10th September 2024

ಒಂದಾಗುವ ಸಮಯದಲ್ಲಿ ವಿಘಟನೆಯ ಮಾತೇಕೆ?

ಗುರುವಾರ ಮಧ್ಯಂತರ ಬಜೆಟ್ ಮಂಡನೆಯಾದ ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಅವರು ಪ್ರತಿಕ್ರಿಯಿಸಿ, ‘ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡುತ್ತಿಲ್ಲ; ಪರಿಸ್ಥಿತಿ ಹೀಗೇ ಮುಂದುವರಿದರೆ ಪ್ರತ್ಯೇಕ ದೇಶದ ಬೇಡಿಕೆ ಮುಂದಿಡಬೇಕಾಗು ತ್ತದೆ’ ಎಂಬ ಧಾಟಿಯಲ್ಲಿ ಆಕ್ರೋಶ ಹೊರಹಾಕಿರುವುದು ಸಾಕಷ್ಟು ಸಂಚಲನೆಯನ್ನು ಹುಟ್ಟುಹಾಕಿದೆ.

ವಾಡಿಕೆಯಂತೆ ಬಿಜೆಪಿಯವರು ಈ ಹೇಳಿಕೆಯನ್ನು ವಿರೋಽಸಿದ್ದರೆ, ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೇರಿದಂತೆ ಅನೇಕ
ಕಾಂಗ್ರೆಸಿಗರು ಈ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಿಕ್ಕಂತೆ ಸಾರ್ವಜನಿಕ ವಲಯದಲ್ಲಿ, ‘ಅತ್ತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು
ಭಾರತ್ ಜೋಡೋ ಯಾತ್ರೆಯಲ್ಲಿ ವ್ಯಸ್ತರಾಗಿದ್ದರೆ, ಇತ್ತ ಅವರ ಪಕ್ಷದವರೇ ಭಾರತ್ ತೋಡೋ ಧಾಟಿಯಲ್ಲಿ ಮಾತಾಡಿರುವುದು ವಿಷಾದನೀಯ’ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಹಕ್ಕಿನ ಸಾಧನೆ ತಪ್ಪೇನೂ ಅಲ್ಲ. ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ಹಣ ಬರುತ್ತಿಲ್ಲ ಎಂದಾದಾಗ ಜನರಿಗೆ ಉತ್ತರದಾಯಿಗಳಾಗಿರುವ ಜನಪ್ರತಿನಿಧಿ ಗಳಲ್ಲಿ ಆಕ್ರೋಶ ಹರಳುಗಟ್ಟುವುದು ಸಹಜವೇ. ಅದನ್ನು ವ್ಯಕ್ತಪಡಿಸುವುದಕ್ಕೊಂದು ವಿಧಾನವಿದೆ ಮತ್ತು ವೇದಿಕೆಯಿದೆ. ಆದರೆ ಆಕ್ರೋಶದ ಬಿಸಿಯಲ್ಲಿ ಸುರೇಶರು ಪ್ರತ್ಯೇಕ ರಾಷ್ಟ್ರಕ್ಕಾಗಿ ಆಗ್ರಹಿಸಿದ್ದು ತರವಲ್ಲದ ವರ್ತನೆ. ಅದರಲ್ಲೂ, ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆ ಮತ್ತು ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಒಂದಿಡೀ ದೇಶದ ಜನರು ಅಸೀಮ ಒಗ್ಗಟ್ಟು ಪ್ರದರ್ಶಿಸಿದ್ದು ಜಗಜ್ಜಾಹೀ ರಾಗಿರುವಾಗ ಮತ್ತು ಏಕತೆಯ ಮಂತ್ರ ಪಠಿಸುತ್ತಿರುವಾಗ, ಹೀಗೊಂದು ಒಡಕಿನ ದನಿ ಹೊಮ್ಮುವುದನ್ನು ಪ್ರಾಯಶಃ ಯಾರೂ ಸಹಿಸುವುದಿಲ್ಲ.

ತಮ್ಮ ಆ ಹೇಳಿಕೆಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿರುವುದನ್ನು ಡಿ.ಕೆ.ಸುರೇಶರು ಗಮನಿಸಬೇಕು. ಜತೆಗೆ, ಹೇಳಿ-ಕೇಳಿ ಇದು ಚುನಾವಣಾ ಪರ್ವವೂ ಆಗಿರುವುದರಿಂದ, ಸಮಾಜದಲ್ಲಿ ಯಾವುದೇ ಕಾರಣಕ್ಕೆ ಸಂಕ್ಷೋಭೆ ಭುಗಿಲೇಳದಂತೆ ನೋಡಿಕೊಳ್ಳಬೇಕಾದ ಗುರುತರ ಹೊಣೆಗಾರಿಕೆ ಜನ ಪ್ರತಿನಿಧಿಗಳ ಹೆಗಲ ಮೇಲಿದೆ. ಇದನ್ನು ಸಂಬಂಧಪಟ್ಟವರು ಸಮರ್ಥವಾಗಿ ಗ್ರಹಿಸಿದಲ್ಲಿ ಅದು ಸಮಾಜದ ಸ್ವಾಸ್ಥ್ಯಕ್ಕೂ, ಪ್ರಜಾಪ್ರಭುತ್ವದ ದೃಢತೆಗೂ ಪೂರಕವಾಗಬಲ್ಲದು.

Leave a Reply

Your email address will not be published. Required fields are marked *