Thursday, 12th December 2024

ಪ್ರಭಾವಿಗಳನ್ನೂ ತನಿಖೆಗೊಳಪಡಿಸಿ

೫೪೫ ಪಿಎಸ್‌ಐ ನೇಮಕ ಅಕ್ರಮದಲ್ಲಿ ಈಗಾಗಲೇ ೨೪ಕ್ಕೂ ಹೆಚ್ಚು ಜನ ಬಂಧನವಾಗಿದ್ದಾರೆ. ತನಿಖೆ ಚುರುಕುಗೊಂಡಂತೆ ರಾಜಕೀಯ ವ್ಯಕ್ತಿಗಳು, ಐಎಎಸ್, ಐಪಿಎಸ್ ಅಧಿಕಾರಿಗಳೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಆದರೆ ಈವರೆಗೂ ಯಾವೊಬ್ಬ ಪ್ರಭಾವಿಗಳಿಗೂ ನೋಟಿಸ್ ಕೊಟ್ಟಿಲ್ಲ, ಕರೆದು ವಿಚಾರಣೆ ಮಾಡಿಲ್ಲ. ಮಧ್ಯಸ್ಥಿಕೆ ವಹಿಸಿದವರನ್ನೇ ಕಿಂಗ್‌ ಪಿನ್ ಎಂದು ಬಿಂಬಿಸಿ, ಬಂಧನಕ್ಕೊಳ ಪಡಿಸಲಾಗುತ್ತಿದೆ. ದೂರದ ಕಲಬುರಗಿಯಲ್ಲಿ ಕುಳಿತು ಡೀಲ್ ಮಾಡುತ್ತಾರೆಂದರೆ ಅವರಿಗೆ ಬೆಂಗಳೂರಿನಲ್ಲಿರುವ ಪ್ರಭಾವಿಗಳ ಸಂಪರ್ಕ ಇದ್ದೇ ಇರುತ್ತದೆ. ಆ ಧೈರ್ಯದ ಮೇಲೆಯೇ ಅವರೆಲ್ಲರೂ ಈ ಪ್ರಕರಣದಲ್ಲಿ ಶಾಮೀಲಾಗಿ ರುತ್ತಾರೆ. ಆದರೆ ತನಿಖಾಧಿಕಾರಿಗಳು, ಪ್ರಕರಣದ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚುವುದನ್ನು ಬಿಟ್ಟು, ಮೇಲ್ನೋಟಕ್ಕೆ ತಪ್ಪೆಸ ಗಿದಂತೆ ಕಂಡುಬಂದವರನ್ನೇ ವಿಚಾರಣೆಗೊಳಪಡಿಸುತ್ತಿದ್ದಾರೆ.

ಪ್ರಭಾವಿಗಳ ರಕ್ಷಣೆ ಮಾಡುವ ಮೂಲಕ ಕಾಟಾಚಾರದ ತನಿಖೆ ಮಾಡಲಾಗುತ್ತಿದೆ. ಪ್ರಕರಣದಲ್ಲಿ ಕೇಳಿಬಂದ ಹೆಸರುಗಳೆಲ್ಲವೂ ಶಾಸ ಕಾಂಗ ಮತ್ತು ಕಾರ್ಯಾಂಗದ ಪ್ರಮುಖ ಹುದ್ದೆಗಳಲ್ಲೇ ಇರುವುದರಿಂದ ಸಿಐಡಿ ಅಧಿಕಾರಿಗಳು ನ್ಯಾಯಸಮ್ಮತವಾಗಿ ತನಿಖೆ ಮಾಡಲು ಸಾಧ್ಯವಾಗದಿರಬಹುದು. ಹೀಗಾಗಿ ಈ ಪ್ರಕರಣದ ಸಂಪೂರ್ಣ ತನಿಖೆಯ ಜವಾಬ್ದಾರಿಯನ್ನು ಸಿಬಿಐಗೆ ವಹಿಸಬೇಕಿದೆ.

ಅಥವಾ ಹಾಲಿ ಮುಖ್ಯನ್ಯಾಯಮೂರ್ತಿಯವರಿಂದ ತನಿಖೆ ಮಾಡಿಸಬೇಕು. ಮತ್ತೊಂದು ಕಡೆ ತಾತ್ಕಾಲಿಕ ಆಯ್ಕೆಪಟ್ಟಿ ರದ್ದುಗೊಳಿಸಿ, ಮರು ಪರೀಕ್ಷೆಗೆ ಆದೇಶಿಸಲಾಗಿದೆ. ಇದರಿಂದ ನ್ಯಾಯವಾಗಿ ಪರೀಕ್ಷೆ ಪಾಸಾದವರಿಗೂ ಅನ್ಯಾಯವಾಗುವ ಸಾಧ್ಯತೆ ಇದೆ. ಏಕೆಂದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಒಮ್ಮೆ ಪಾಸಾದವರು ಮತ್ತೊಮ್ಮೆ ಪಾಸಾಗುತ್ತಾರೆ ಎಂಬ ನಂಬಿಕೆ ಇರುವುದಿಲ್ಲ. ಅಥವಾ ಅದೇ ಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸುವ ಶಕ್ತಿಯೂ ಇರುವುದಿಲ್ಲ. ಹೀಗಾಗಿ ಎಫ್ ಐಆರ್ ದಾಖಲಾದ ಅಭ್ಯರ್ಥಿಗಳಿಗೆ ಮಾತ್ರ ಮರುಪರೀಕ್ಷೆ ನಡೆಸುವ ಮೂಲಕ ಕಷ್ಟಪಟ್ಟು ಓದಿ, ಪಾಸಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕಿದೆ.

ಆದರೆ ಸದ್ಯಕ್ಕೆ ಸರಕಾರಕ್ಕೆ ಇದ್ಯಾವುದನ್ನೂ ಕೇಳಿಸಿಕೊಳ್ಳುವ ವ್ಯವಧಾನವಿಲ್ಲ. ಅಭ್ಯರ್ಥಿಗಳು ಈಗಾಗಲೇ ಪ್ರತಿಭಟನೆ ಬಿಟ್ಟು ಕೆಎಟಿ ಮೊರೆ ಹೋಗಿದ್ದು, ಅಲ್ಲಿಯಾದರೂ ನ್ಯಾಯ ಸಿಗಬಹುದೇ ಎಂಬುದನ್ನು ಕಾದು ನೋಡಬೇಕಿದೆ. ಏನೇ ಆಗಲಿ, ಅಭ್ಯರ್ಥಿಗಳು ಆತ್ಮವಿ ಶ್ವಾಸದಿಂದ ಇರಬೇಕಿದೆ.