ಬೆಂಗಳೂರಿನಲ್ಲಿ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯಕ್ಕೆ ಹರಿದು ಬಂದಿರುವ ಬಂಡವಾಳದಲ್ಲಿ ಶೇ.೮೦ ರಷ್ಟು ಬೆಂಗಳೂರು ಹೊರಗಡೆ ದಾವಣಗೆರೆ, ಹುಬ್ಬಳ್ಳಿ-ಧಾರವಾಡ, ಹುಮ್ನಾಬಾದ್, ಮಂಗಳೂರು, ಮೈಸೂರು, ಬಳ್ಳಾರಿ ಸೇರಿದಂತೆ ರಾಜ್ಯದ ೧೩ ರಿಂದ ೧೪ ಜಿಲ್ಲೆಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದು ಸ್ವಾಗತಾರ್ಹ.
ಉದ್ಯೋಗಕ್ಕಾಗಿ ಬೆಂಗಳೂರು ನಗರವೊಂದನ್ನೇ ನೆಚ್ಚಿಕೊಳ್ಳುವ ಪರಿಸ್ಥಿತಿ ಈಗ ಇದ್ದು, ಮುಖ್ಯಮಂತ್ರಿಗಳು ಹೇಳಿದ್ದು ಅನುಷ್ಠಾನಕ್ಕೆ ಬಂದರೆ ಇತರ ನಗರಗಳಲ್ಲೂ ಉದ್ಯೋಗಾವ ಕಾಶ ಸೃಷ್ಟಿಯಾಗಿ, ಬೆಂಗಳೂರು ನಗರಕ್ಕೆ ವಲಸೆ ಬರುವವರ ಸಂಖ್ಯೆ ಕಡಿಮೆಯಾಗುತ್ತದೆ. ಈಗಾಗಲೇ ಮಹಾರಾಷ್ಟ್ರವು ಈ ಪ್ರಯೋಗವನ್ನು ಮಾಡಿ ಯಶಸ್ವಿಯಾಗಿದೆ. ಮುಂಬೈ ನಗರಕ್ಕೆ ಪರ್ಯಾಯ ವಾಗಿ ಅಲ್ಲಿ ಪುಣೆ ನಗರವನ್ನು ಹೂಡಿಕೆದಾರರು ಆಯ್ಕೆ ಮಾಡಿ ಕೊಳ್ಳುವ ಪರಿಸ್ಥಿತಿ ಸೃಷ್ಟಿ ಮಾಡಿದ್ದರಿಂದ ಇದೀಗ ಮುಂಬೈ ಮೇಲಿನ ಹೊರೆ ಬಹಳಷ್ಟು ಕಡಿಮೆಯಾಗಿದೆ. ಆದರೆ ಹೂಡಿಕೆದಾರರ ಪೈಕಿ ಹೆಚ್ಚಿನವರಿಗೆ ಬೆಂಗಳೂರೇ ಬೇಕು ಎಂದು ಹೇಳು ವುದು ಸಹಜ.
ಬೆಂಗಳೂರಿನಲ್ಲಿ ಸಂಪನ್ಮೂಲಗಳ ಲಭ್ಯತೆ ಇದೆ ಎಂಬ ಕಾರಣಕ್ಕಾಗಿ ಬೆಂಗಳೂರು ಹೂಡಿಕೆದಾರರನ್ನು ಆಕರ್ಷಿಸುವುದು ಸಹಜವೇ. (ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಬೆಂಗಳೂರು ಕೂಡ ಮೊದಲಿನಂತಿಲ್ಲ. ಮಳೆ ಜೋರಾಗಿ ಬಂದಾಗ ಕೆಲವು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗುತ್ತದೆ, ರಸ್ತೆಗಳು ಹದಗೆಟ್ಟಿವೆ) ಆದ್ದರಿಂದ ಬೆಂಗಳೂರು ಆಚೆಗಿನ ನಗರಗಳಲ್ಲೂ ಅಗತ್ಯ ಮೂಲ ಸೌಕರ್ಯ ಕಲ್ಪಿಸಿ, ಅಲ್ಲಿಗೆ ಹೆಚ್ಚಿನ ಹೂಡಿಕೆಗಳು ಬರುವಂತೆ ಮಾಡುವುದು ಈಗ ಸರಕಾರದ ಮುಂದೆ ಇರುವ ಸವಾಲು.
ಆದ್ದರಿಂದ ಬೆಂಗಳೂರಿನ ಆಚೆಗೆ ಮೂಲಸೌಕರ್ಯದ ಕಡೆಗೆ ತಕ್ಷಣ ಗಮನಹರಿಸಬೇಕು. ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು, ಅನುಮೋದನೆಗಳು ತ್ವರಿತವಾಗಿ ಸಿಗುವಂತೆ ಮಾಡುವುದು ಆದರೆ ಮಾತ್ರ ಮುಖ್ಯಮಂತ್ರಿ ಹೇಳಿದ ಮಾತು ಅನುಷ್ಠಾನಕ್ಕೆ ಬರಲು ಸಾಧ್ಯ. ಹಿಂದಿನ ಸಮಾವೇಶಗಳ ಸಂದರ್ಭದಲ್ಲಿ ಆಗಿದ್ದ ಹಲವು ಒಪ್ಪಂದಗಳು ಕಾರ್ಯರೂಪಕ್ಕೆ ಬಂದೇ ಇಲ್ಲ. ಆದರೆ ಈ ಬಾರಿ ಆ ರೀತಿ ಆಗದಂತೆ ನೋಡಿಕೊಳ್ಳಬೇಕಿದೆ. ಅನುಷ್ಠಾನದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ನಿಯಮಗಳು ಸೇರಿ ದಂತೆ ಯಾವುದೇ ಕಾನೂನು ಉಲ್ಲಂಘನೆ ಆಗದಂತೆಯೂ ಸರಕಾರ ಕಾಳಜಿ ವಹಿಸಬೇಕು.