ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿಪರ್ವತ ಆಶ್ರಮದ ಜೈನ ಮುನಿಗಳ ದೇಹವನ್ನು ಕತ್ತರಿಸಿ
ಬರ್ಬರವಾಗಿ ಹತ್ಯೆ ಮಾಡಿರುವುದು ತೀವ್ರ ಖಂಡನೀಯ. ದಿನಕ್ಕೆ ಒಂದೇ ಬಾರಿ ಉಪಾಹಾರ, ಒಣಹುಲ್ಲಿನ ಮೇಲೆ ನಿದ್ರಿಸುವಂತಹ ಹತ್ತು ಹಲವು ಕಠಿಣ ಜೀವನಶೈಲಿ ಯನ್ನು ಪಾಲಿಸುವವರು ಜೈನ ಮುನಿಗಳು.
ಅಹಿಂಸಾ ತತ್ವ, ಸಿದ್ಧಾಂತಗಳನ್ನೇ ಪಾಲಿಸಿ, ಎಲ್ಲರಿಗೂ ಅದನ್ನು ಪಾಲಿಸಲು ಪ್ರೇರೇಪಿಸು ತ್ತಿದ್ದ ಸಾಧು ಸಂತರಿಗೇ ಈ ರೀತಿಯ ಸಾವು ಬಂದಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ. ಕಾಮಕುಮಾರಮುನಿಗಳಿಗೆ ವಿದ್ಯುತ್ ಶಾಕ್ ನೀಡಿ, ದೇಹವನ್ನು ತುಂಡು-ತುಂಡಾಗಿ ಕತ್ತರಿಸಿ ಬೋರ್‌ವೆಲ್‌ನಲ್ಲಿ ಹಾಕಲಾಗಿದೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರೂ ಹಲವು ಆಯಾಮಗಳಲ್ಲಿ ತನಿಖೆ ಮಾಡಬೇಕಾದ ಅಗತ್ಯವಿದೆ.
ರಾಜ್ಯ ಸರಕಾರ ಈಗಾಗಲೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ತನಿಖೆ ನಡೆಸಿ, ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿದೆ. ಆದರೆ ರಾಜಕೀಯ ಪಕ್ಷಗಳು ಈ ಪ್ರಕರಣವನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಸರಿಯಲ್ಲ. ಕಾಮಕುಮಾರ ನಂದಿ ಮಹಾರಾಜರು ನಾಪತ್ತೆಯಾದ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ೨೪ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಪೊಲೀಸರ ನಡೆಯನ್ನು ಇಡೀ ಜೈನ ಸಮುದಾಯವೇ ಮೆಚ್ಚಿದೆ. ಆದರೆ ವಿನಾಕಾರಣ ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯುವ ಪ್ರಯತ್ನ ಮಾಡಲಾಗುತ್ತಿದೆ. ಆ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಪ್ರಯತ್ನಕ್ಕೆ ಕೈ ಹಾಕಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ಮುಖಂಡರು ಆರೋಪ-ಪ್ರತ್ಯಾರೋಪಗಳನ್ನು ನಿಲ್ಲಿಸಿ, ಸಮಾಜದಲ್ಲಿ ಶಾಂತಿ ಸ್ಥಾಪನೆಗೆ ಮುಂದಾಗಬೇಕಿದೆ. ಅಲ್ಲದೆ, ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ರಾಜ್ಯ ಸರಕಾರ ಹಲವು ಕ್ರಮಗಳನ್ನು ಕೈಗೊಳ್ಳಬೇಕಾಗಿರುವುದೂ ಅಗತ್ಯವಿದೆ. ಜೈನ ಮುನಿ ಗಳು ಒಂದುಕಡೆಯಿಂದ ಮತ್ತೊಂದೆಡೆಗೆ ಧರ್ಮಪ್ರಚಾರಕ್ಕಾಗಿ ಕಾಲ್ನಡಿಗೆಯಲ್ಲಿ ವಿಹಾರ ಮಾಡುತ್ತಾರೆ. ಅಂತಹ ಸಂದರ್ಭದಲ್ಲಿ ಅವರಿಗೆ ಪೊಲೀಸ್ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕಿದೆ.