ಅಂದುಕೊಂಡಂತೆಯೇ, ಲೋಕಸಭಾ ಚುನಾವಣೆಗೆ ಸಂಬಂಧಿಸಿ ತನ್ನ ಅಭ್ಯರ್ಥಿಗಳ ೨ನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ರಾಜ್ಯದ ಹಾಲಿ ೮ ಸಂಸದ ರಿಗೆ ಟಿಕೆಟ್ ಮಿಸ್ ಆಗಿರುವುದು, ಒಂದಷ್ಟು ಹೊಸ ಮುಖಗಳಿಗೆ ಮಣೆಹಾಕಿರುವುದು ಇದರಲ್ಲಿ ಎದ್ದು ಕಾಣುವ ಸಂಗತಿ. ಟಿಕೆಟ್ ದಕ್ಕಿದವರಿಗೆ ಖುಷಿಯಾಗಿದ್ದರೆ, ಸಿಗದಿದ್ದವರಿಗೆ ನಿರಾಶೆ-ಹತಾಶೆ ಆಗಿರುವುದನ್ನು ತಳ್ಳಿಹಾಕುವಂತಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಒಂದಷ್ಟು ಬಂಡಾಯ-ಭಿನ್ನದನಿ ಹೊಮ್ಮ ಬಹುದೇ? ಎಂಬುದು ರಾಜಕೀಯ ಪಂಡಿತರಲ್ಲಿ ಸುಳಿದಾಡುತ್ತಿರುವ ಪ್ರಶ್ನೆ.
ಈ ಟಿಕೆಟ್ ಹಂಚಿಕೆಯ ಚಟುವಟಿಕೆಯೇ ಹಾಗೆ. ಅದು ಹಲವರಿಗೆ ಪುಳಕವನ್ನೂ, ಮತ್ತೆ ಕೆಲವರಿಗೆ ನಿರಾಸೆಯನ್ನೂ ಜತೆಜತೆಯಲ್ಲೇ ಹೊತ್ತು ತರುವಂಥ ಅನಿವಾರ್ಯ ಸನ್ನಿವೇಶ. ಇದು ಬಹುತೇಕ ಎಲ್ಲ ಪಕ್ಷಗಳ ಪಾಳಯದಲ್ಲೂ ಕಂಡುಬರುವ ವಾತಾವರಣವೇ. ಹೀಗಾಗಿ ಅಸಮಾಧಾನದ ಹೊಗೆ ಒಂದಷ್ಟು ಕಾಲ ಸುಳಿದಾಡುತ್ತಲೇ ಇರುತ್ತದೆ ಎಂಬುದು ಕಹಿವಾಸ್ತವ. ಆದರೆ, ಜನಸೇವೆ ಮತ್ತು ಮತಕ್ಷೇತ್ರದ ಅಭಿವೃದ್ಧಿಗೇ ನಾವು ಆದ್ಯತೆ ನೀಡಬೇಕು ಎಂಬ ಸಂಕಲ್ಪದೊಂದಿಗೆ ಟಿಕೆಟ್ ವಂಚಿತರು ಮತ್ತು ಟಿಕೆಟ್ ಗಿಟ್ಟಿಸಿಕೊಂಡವರು ಇಬ್ಬರೂ ಜತೆಗೂಡಿ ಕಾರ್ಯನಿರ್ವಹಿಸಬೇಕಾದ್ದು ಆದರ್ಶದ ನಡೆಯಾಗುತ್ತದೆ.
ಮನಸ್ಸನ್ನು ಹೀಗೆ ಗಟ್ಟಿಮಾಡಿಕೊಂಡಾಗ, ಇರಬಹುದಾದ ಕಹಿ ತಾನೇತಾನಾಗಿ ಕರಗುವುದು ಖರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಸರಕಾರ ಎಂಬ ಆಸ್ಥಾನಕ್ಕೆ ತೆರಳಿ, ತನ್ನ ಕುಂದುಕೊರತೆಗಳನ್ನು ಹೇಳಿಕೊಳ್ಳಲಾಗುವುದಿಲ್ಲ, ಅಳಲು ತೋಡಿ ಕೊಳ್ಳಲಾಗುವುದಿಲ್ಲ ಎಂಬ ಕಾರಣಕ್ಕೆ, ಪ್ರಜಾಪ್ರತಿನಿಧಿಯ ಪರಿಕಲ್ಪನೆಯನ್ನು ಜಾರಿಗೆ ತಂದಿರುವ ವ್ಯವಸ್ಥೆಯಿದು- ನಮ್ಮ ಪ್ರಜಾಪ್ರಭುತ್ವ. ಇಲ್ಲಿ ಜನರಿಂದ ಮತ ಪಡೆದು ಅವರ ಪ್ರತಿನಿಽಯಾಗಿ ಚುನಾಯಿತನಾಗುವವನು ಜನರ ಆಶೋತ್ತರ ಗಳನ್ನು ಈಡೇರಿಸುವ ನಿಟ್ಟಿನಲ್ಲಿ ದನಿ ಯಾಗುತ್ತಾನೆ.
ಸರಕಾರವೆಂಬ ಆಸ್ಥಾನದಲ್ಲಿನ ನ್ಯಾಯದ ಗಂಟೆಯನ್ನು ಬಾರಿಸುವ ಅಹವಾಲುದಾರನಾಗುತ್ತಾನೆ. ಇಂಥ ಮಹತ್ತರ ಜವಾಬ್ದಾರಿ ಹೊರಬೇಕಾದವರು ಜನಕಲ್ಯಾಣವನ್ನೇ ಆದ್ಯತೆಯನ್ನಾಗಿಸಿಕೊಳ್ಳಬೇಕು ಮತ್ತು ಆ ನಿಟ್ಟಿನಲ್ಲಿ ಅಹರ್ನಿಶಿ ದುಡಿಯಲು ಸಂಕಲ್ಪಿಸಬೇಕು. ಸಂಕಲ್ಪವು ಸದೃಢವಾಗಿದ್ದರೆ ನೆರವೇರಿಕೆ ಕಷ್ಟವೇನಲ್ಲ. ಅದು ಅಂತಿಮವಾಗಿ ಪ್ರಜಾಕಲ್ಯಾಣಕ್ಕೆ ಹೇತುವಾಗುತ್ತದೆ. ಸಂಬಂಧಪಟ್ಟವರು ಇದನ್ನು ಅರಿಯಲಿ.