Saturday, 14th December 2024

ಪುರುಷರ ಮನಸ್ಥಿತಿ ಬದಲಾಗಲಿ

ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಸ್ಥಿತಿಗತಿ ಬಗ್ಗೆ ಅಧ್ಯಯನ ನಡೆಸಿರುವ ಜಸ್ಟಿಸ್ ಹೇಮಾ ಸಮಿತಿಯ ವರದಿಯು ಚಿತ್ರರಂಗದ ಕರಾಳಮುಖ ವನ್ನು ಬಿಚ್ಚಿಟ್ಟಿದೆ. ವರದಿ ಬಹಿರಂಗವಾಗುತ್ತಿದ್ದಂತೆಯೇ ಅಲ್ಲಿ ಬಿರುಗಾಳಿ ಎದ್ದಿದೆ. ಹೊಸದಾಗಿ ಹಲವು ಪ್ರಮುಖ ನಟ, ನಿರ್ದೇಶಕರ ಮೇಲೆ ಲೈಂಗಿಕ ದೌರ್ಜನ್ಯದ ದೂರುಗಳು ಕೇಳಿಬಂದಿವೆ.

ಹೇಮಾ ಸಮಿತಿ ವರದಿಯನ್ನು ಕೇವಲ ಮಲೆಯಾಳಂ ಚಿತ್ರರಂಗಕ್ಕೆ ಅನ್ವಯಿಸಬೇಕಾದ ಅಗತ್ಯವಿಲ್ಲ. ಹಿಂದಿ ಸೇರಿದಂತೆ ಇಡೀ ಭಾರತೀಯ ಚಿತ್ರರಂಗದ
ಪರಿಸ್ಥಿತಿ ಇದಕ್ಕೆ ಭಿನ್ನವಾಗಿಲ್ಲ. ಇಲ್ಲಿ ಮಹಿಳೆಯನ್ನು ತೆರೆಯ ಮೇಲೆ ಮತ್ತು ತೆರೆಯ ಹಿಂದೆ ಪ್ರದರ್ಶನದ ವಸ್ತು ಎಂಬಂತೆಯೇ ಬಿಂಬಿಸಲಾಗುತ್ತಿದೆ. ವೃತ್ತಿ ಗೌರವ, ಘನತೆ ಉಳಿಸಿಕೊಂಡು ಈ ರಂಗದಲ್ಲಿ ಕೆಲಸ ಮಾಡುವುದು ಕಷ್ಟ ಎನ್ನುವುದು ಬಹುತೇಕ ಕಲಾವಿದೆಯರ ಮಾತು. ೨೦೧೭ರಲ್ಲಿ ಕನ್ನಡ ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿರುವ ಖ್ಯಾತ ನಟಿಯೊಬ್ಬನ್ನು ಸ್ಟಾರ್ ನಟ ದಿಲೀಪ್ ಕುಮ್ಮಕ್ಕಿನ ಮೇರೆಗೆ ಅಪಹರಿಸಿ, ಲೈಂಗಿಕ ದೌರ್ಜನ್ಯ ಎಸಗಲಾಗಿತ್ತು.

ಈ ಬಳಿಕ ಮಲಯಾಳಂ ಚಿತ್ರರಂಗದ ಕಲಾವಿದೆಯರ ಸಂಘ ‘ವಿಮೆನ್ ಇನ್ ಸಿನೆಮಾ ಕಲೆಕ್ಟಿವ್’ ಒತ್ತಾಯದ ಮೇರೆಗೆ ನ್ಯಾಯಮೂರ್ತಿ ಹೇಮಾ ನೇತೃತ್ವ ದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿ ೨೦೧೯ರಲ್ಲಿಯೇ ಸರಕಾರಕ್ಕೆ ವರದಿ ಸಲ್ಲಿಸಿದೆ. ಆದರೆ, ಸರಕಾರ ವರದಿಯನ್ನು ಈ ತನಕ ಮುಚ್ಚಿಟ್ಟಿತ್ತು.
ಇದೀಗ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾಗಿದ್ದ ಅರ್ಜಿ ಹಾಗೂ ನ್ಯಾಯಾಲಯದ ಸೂಚನೆ ಮೇರೆಗೆ ವರದಿಯನ್ನು ಬಹಿರಂಗಪಡಿಸಲಾಗಿದೆ. ಕಲಾವಿದರು ಜೀವ ಭಯ ಮತ್ತು ಚಿತ್ರರಂಗದಲ್ಲಿ ನೆಲೆ ಕಳೆದುಕೊಳ್ಳುವ ಭಯದಿಂದಾಗಿ ದೌರ್ಜನ್ಯದ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸಿನಿಮಾ ನಾಯಕಿಯರು ಆರಂಭದಲ್ಲಿ ನಿರ್ಮಾಪಕ, ನಿರ್ದೇಶಕ ಮತ್ತು ನಾಯಕನ ಮರ್ಜಿಗನುಸಾರ ನಡೆದುಕೊಳ್ಳುವುದು ಅನಿವಾರ‍್ಯ ಎಂಬ ಮಾತಿದೆ. ಇದಕ್ಕೆ ಕೆಲವೊಂದು ಅಪವಾದಗಳಿರಬಹುದು. ಆದರೆ ‘ಮೀ ಟೂ’ ಅಭಿಯಾನದ ಸಂದರ್ಭದಲ್ಲಿ ಹಲವು ನಟಿಯರು ತಮಗಾದ ಕೆಟ್ಟ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಇದೀಗ ವರದಿ ಬೆನ್ನಲ್ಲೇ ‘ದೃಶ್ಯಂ’ನಂತಹ ಹಲವು ಚಿತ್ರಗಳಿಗೆ ಹೆಸರಾದ ನಟ-ನಿರ್ಮಾಪಕ ಸಿದ್ದಿಕ್ ವಿರುದ್ಧ ದೂರು ದಾಖಲಾಗಿದೆ. ನಟ ಮೋಹನ್ ಲಾಲ್ ಸೇರಿದಂತೆ ಕಲಾವಿದರ ಸಂಘಟನೆ ‘ಅಮ’ ದ ಪದಾಧಿಕಾರಿಗಳೆಲ್ಲರೂ ರಾಜೀನಾಮೆ ನೀಡಿದ್ದಾರೆ. ಮಹಿಳೆಯರ ಕುರಿತ ಪುರುಷ ಮನಸ್ಥಿತಿ ಬದಲಾಗದ ಹೊರತು ಸಿನಿಮಾರಂಗ ಕಲಾವಿದೆಯರ ಪಾಲಿಗೆ ಗೌರವದ ಸ್ಥಳವಾಗಿ ಉಳಿಯಲು ಸಾಧ್ಯವಿಲ್ಲ.