Monday, 16th September 2024

ಹೆಣ್ಣಿನ ಚಾರಿತ್ರ್ಯವಧೆ ಸಲ್ಲ

ಬಾಲಿವುಡ್ ನಟಿ ಹಾಗೂ ಉತ್ತರಾಖಂಡ ರಾಜ್ಯದ ‘ಮಂಡಿ’ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಂಗನಾ ರಣಾವತ್ ಅವರ ವಿಷಯದಲ್ಲಿ ಕಾಂಗ್ರೆಸ್‌ನ ನಾಯಕಿ ಸುಪ್ರಿಯಾ ಶ್ರೀನೇತಾ ಅವರು ನಡೆದುಕೊಂಡ ರೀತಿ ಸರ್ವಥಾ ಸಮರ್ಥನೀಯವಲ್ಲ.

ಕಾಂಗ್ರೆಸ್‌ನ ಅಧಿಕೃತ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆಯೂ ಆಗಿರುವ ಸುಪ್ರಿಯಾ ಅವರು, ಕಂಗನಾ ರಣಾವತ್ ಅವರ ಮೈಮಾಟ ಪ್ರದರ್ಶನದ ಚಿತ್ರವೊಂದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು, ‘ಮಂಡಿಯಲ್ಲಿ ಯಾವ ಧಾರಣೆ ನಡೆಯುತ್ತಿದೆ ಎಂದು ಯಾರಾದರೂ ಹೇಳುವಿರಾ?’ ಎಂಬರ್ಥದಲ್ಲಿ ಬರೆದುಕೊಂಡಿದ್ದು ಸಾಕಷ್ಟು ಸಂಚಲನ ಸೃಷ್ಟಿಸಿ ಜನಾ ಕ್ರೋಶಕ್ಕೂ ಕಾರಣವಾಗಿದ್ದು ಈಗ ಜಗಜ್ಜಾಹೀರು.

ಇದು ತಾರಕಕ್ಕೇರಬಹುದು ಎಂಬ ಮುನ್ನೆಚ್ಚರಿಕೆಯೊಂದಿಗೆ ಪಕ್ಷ ಅವರಿಗೆ ನೀಡಲಿದ್ದ ಟಿಕೆಟ್ ಅನ್ನೂ ಹಿಂತೆಗೆದುಕೊಂಡಿದೆ ಎಂಬುದು ಲಭ್ಯ ಮಾಹಿತಿ. ಸಾರ್ವತ್ರಿಕ ಚುನಾವಣೆ ಎಂದಾಗ ಸ್ಪರ್ಧಿ-ಪ್ರತಿಸ್ಪರ್ಧಿಗಳ ನಡುವೆ ಟೀಕಾಪ್ರಹಾರ, ಪರಸ್ಪರರ ಕಾಲೆಳೆತ ನಡೆಯುವುದು ಸಹಜ. ಚುನಾವಣಾ ಅಖಾಡವು ರಂಗೇರುವುದಕ್ಕೆ ಇದು ಒಂದು ಮುಟ್ಟಕ್ಕೆ ಒತ್ತಾಸೆ ನೀಡುವುದೂ
ಉಂಟು. ಆದರೆ ಸಭ್ಯತೆಯ ಎಲ್ಲೆ ಮೀರಿ ಯಾರನ್ನಾದರೂ ಟೀಕಿಸುವುದನ್ನು ಸಹಿಸಲಾದೀತೇ? ಅದರಲ್ಲೂ ಸುಪ್ರಿಯಾ ಅವರು ಸ್ವತಃ ಒಬ್ಬ ಹೆಣ್ಣಾಗಿ, ಕಂಗನಾರಂಥ ಮತ್ತೊಂದು ಹೆಣ್ಣನ್ನು ಹೀಗೆ ಅಸಭ್ಯ ರೀತಿಯಲ್ಲಿ ಹಾಗೂ ನಿಂದನಾತ್ಮಕ ಭಾಷೆಯಲ್ಲಿ ಹಂಗಿಸಿದ್ದು ತೀರಾ ಅತಿರೇಕವಾಯಿತು.

‘ಇನ್ನೊಬ್ಬರ ಮುಖಕ್ಕೆ ಮಸಿ ಬಳಿಯಲೆಂದು ಮುಂದಾದರೆ ಮೊದಲು ಕೈಮಸಿಯಾಗುವುದು ಹಾಗೆ ಬಳಿಯಲು ಹೊರಡು ವವರದ್ದೇ; ಇನ್ನೊಬ್ಬರನ್ನು ಮನೆ ಸುಡಲು ನಮ್ಮ ಜೇಬಿನಲ್ಲಿ ಕೆಂಡವನ್ನಿಟ್ಟುಕೊಂಡರೆ ಅದು ಮೊದಲು ಸುಡುವುದು ನಮ್ಮ ಜೇಬನ್ನೇ’ ಎಂಬಂಥ ಸತ್ಯಗಳನ್ನು ಸುಪ್ರಿಯಾ ಅರ್ಥಮಾಡಿಕೊಳ್ಳದಿದ್ದುದು ವಿಷಾದನೀಯ. ಇಂಥ ಅಪಸವ್ಯಗಳು ಘಟಿಸಿದ  ಬಳಿಕ ಸಂಬಂಧಪಟ್ಟವರು ಒಂದೊಮ್ಮೆ ಕ್ಷಮೆ ಕೇಳಿದರೂ, ಟೀಕೆಯ ಸಂತ್ರಸ್ತರಿಗೆ ಆದ ನೋವಿಗೆ ಮತ್ತು ಅವರು ಅನುಭವಿಸಿದ
ಸಂಕಟಕ್ಕೆ ಪರಿಹಾರವನ್ನು ತುಂಬಿಕೊಡಲಾಗುತ್ತದೆಯೇ? ಯಾವುದೇ ಅಭಿಪ್ರಾಯಭೇದಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ
ವ್ಯಕ್ತಪಡಿಸುವುದಕ್ಕೂ ಮುನ್ನ ಸಾವಿರ ಸಲ ಯೋಚಿಸಬೇಕಾಗುತ್ತದೆ. ಸುಪ್ರಿಯಾರ ನಿದರ್ಶನದಿಂದ ಮಿಕ್ಕವರು ಪಾಠ ಕಲಿಯಲಿ.

Leave a Reply

Your email address will not be published. Required fields are marked *