Thursday, 12th December 2024

ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ: ಸಂಸದರು ಹೊಣೆಗಾರಿಕೆ ನಿಭಾಯಿಸಲಿ

ಬಿಎಸ್‌ಎಫ್, ಸಿಆರ್‌ಪಿಎಫ್, ಐಟಿಬಿಪಿ, ಸಶಸ್ತ್ರ ಸೀಮಾ ಬಲ, ಸಚಿವಾಲಯ ಭದ್ರತಾ ಪಡೆ, ಅಸ್ಸಾಂ ರೈಫಲ್ಸ್, ಮಾದಕ ವಸ್ತು ನಿಯಂತ್ರಣಾ ಇಲಾಖೆ ಸೇರಿದಂತೆ ವಿವಿಧ ಭದ್ರತಾ ಪಡೆಗಳ ಹುದ್ದೆಗಳ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಅವಕಾಶ ನೀಡದಿರುವುದು ಕನ್ನಡಿಗರಿಗೆ ಆಗುತ್ತಿರುವ ಬಹುದೊಡ್ಡ ದ್ರೋಹ.

ಜನವರಿಯಲ್ಲಿ ನಡೆಯಲಿರುವ ಈ ಆಯ್ಕೆ ಪರೀಕ್ಷೆಯಲ್ಲಿ ಕೇವಲ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಬರೆಯುವುದಕ್ಕೆ ಅವಕಾಶ ನೀಡಲಾಗಿದೆ. ಇದರಿಂದಾಗಿ ಕನ್ನಡ ಮಾತ್ರವಲ್ಲದೇ, ಹಿಂದಿಯೇತರ ರಾಜ್ಯಗಳ ಅಭ್ಯರ್ಥಿಗಳನ್ನು ಅವಕಾಶದಿಂದ  ವಂಚಿತ ರನ್ನಾಗಿ ಮಾಡಿದಂತಾಗುತ್ತಿದೆ. ಕೇದ್ರ ಗೃಹ ಮಂತ್ರಿ ಅಮಿತ್ ಶಾ ನೇತೃತ್ವದ ಅಧಿಕೃತ ಭಾಷೆಗಳ ಸಂಸತ್ತಿನ ಸಮಿತಿಯು ಇತ್ತೀಚೆಗೆ ರಾಷ್ಟ್ರಪತಿಗಳಿಗೆ ನೀಡಿದ ೧೧ನೇ ವರದಿ ಯಲ್ಲಿ ಎಲ್ಲ ರಾಜ್ಯಗಳಲ್ಲಿ ಸ್ಥಳೀಯ ಭಾಷೆಗಳಿಗೆ ಆದ್ಯತೆ ನೀಡಬೇಕು ಎಂದು ಶಿಫಾರಸ್ಸು ಮಾಡಿದೆ.

ಕಲಿಕೆಯಲ್ಲಿ ಮಾತೃಭಾಷೆಗಳಿಗೆ ಆದ್ಯತೆ ನೀಡಿದ ಬಳಿಕ ಉದ್ಯೋಗದ ಪ್ರಶ್ನೆ ಬಂದಾಗ ಮಾತ್ರ ಹಿಂದಿಯ ಪ್ರವೇಶ ಪರೀಕ್ಷೆ ಬರೆಯಬೇಕು ಎನ್ನುವುದು ಯಾವ ನ್ಯಾಯ? ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸಬೇಕಾಗಿರುವ ಸರಕಾರವು ಭಾಷಾ ವಿಷಯದಲ್ಲಿ ಇಬ್ಬಗೆ ನೀತಿ ಅನುಸರಿಸುವ ಮೂಲಕ ಹಿಂದಿಯೇತರ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ. ಕೇಂದ್ರ ಮತ್ತು ರಾಜ್ಯಗಳ ನಡುವೆ ಸಹೋದರತ್ವ ಬೆಳೆಯಲು ಮುಖ್ಯ ಕಾರಣವೇ ಭಾಷೆ. ಈ ಭಾಷೆಯ ವಿಷಯದಲ್ಲಿ ಕೇಂದ್ರ ಸರಕಾರವು ಜಾಗರೂಕತೆಯಿಂದ ಹೆಜ್ಜೆ ಇಡಬೇಕಿದೆ.

ಇಲ್ಲವಾದಲ್ಲಿ ಒಕ್ಕೂಟ ವ್ಯವಸ್ಥೆಗೇ ಸಮಸ್ಯೆಯಾದೀತು. ರಾಜ್ಯದ ಸಂಸದರು ಈ ಕುರಿತು ಸಂಸತ್ತಿನಲ್ಲಿ ಧ್ವನಿ ಎತ್ತಬೇಕು. ಕೇಂದ್ರ ದಲ್ಲಿ ಬಿಜೆಪಿ ಸರಕಾರವಿರುವುದರಿಂದ ರಾಜ್ಯದಿಂದ ಆಯ್ಕೆಯಾಗಿರುವ ಬಿಜೆಪಿಯ ಎಲ್ಲ ೨೫ ಸಂಸದರು, ಸ್ಥಳೀಯ ಭಾಷೆಗಳಲ್ಲಿ ಕೇಂದ್ರೀಯ ಪಡೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆಗೆ ಅವಕಾಶ ನೀಡುವಂತೆ ಒತ್ತಡ ಹೇರಬೇಕು. ಇಲ್ಲವಾ ದಲ್ಲಿ ಕನ್ನಡಿಗರ ಆಕ್ರೋಶ ಸಹಜವಾಗಿಯೇ ಸಂಸದರ ಮೇಲೆ ವ್ಯಕ್ತವಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡದೇ, ಸಂಸದರು ತಮ್ಮ ಹೊಣೆ ಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕಿದೆ