ಬಿಸಿಯಾದಾಗಲೇ ಬೆಣ್ಣೆ ಕರಗುವುದು ಎಂಬ ಮಾತೊಂದಿದೆ. ಇದು ಎಲ್ಲ ಕಾಲಕ್ಕೂ, ಎಲ್ಲ ಸಂದರ್ಭಗಳಿಗೂ ಸಲ್ಲುವ ಮಾತು. ಮಹಾರಾಷ್ಟ ಸರಕಾರ ಇದೀಗ ಕರ್ನಾಟಕದೊಂದಿಗಿನ ತನ್ನ ಗಡಿಭಾಗದ ಜತ್ತ ಪ್ರದೇಶದ ಕನ್ನಡಿಗರ ಮೂಗಿಗೆ ತುಪ್ಪ ಸವರುವ (ನೀರು ಸುರಿಯುವ ಅನ್ನಬಹುದು) ಕೆಲಸಕ್ಕೆ ಕೈಹಾಕಿದೆ.
ಬೆಳಗಾವಿ ವಿಚಾರದಲ್ಲಿ ಕರ್ನಾಟಕದ ಜತೆಗೆ ಸದಾ ಕಾಲ ಗಡಿ ಕ್ಯಾತೆ ತೆಗೆಯುತ್ತ ಜಗಳ ಕಾಯುವ ಮಹಾರಾಷ್ಟ್ರಕ್ಕೆ ಈ ಬಾರಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರಿಯಾಗಿಯೇ ಉತ್ತರ ನೀಡಿದ್ದಾರೆ. ದಶಕಗಳ ಕಾಲ ಮಹಾ ರಾಷ್ಟ್ರದಿಂದ ನಿರ್ಲಕ್ಷ್ಯಕ್ಕೊಳಗಾದ ಜತ್ತ ಪ್ರದೇಶದ ಅಚ್ಚ ಕನ್ನಡಿಗರ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳುವ ಮಾತನ್ನಾಡಿದ್ದಾರೆ.
ಅವರ ಹೇಳಿಕೆ ಹೊರ ಬೀಳುತ್ತಲೇ ಜತ್ತ ಭಾಗದ ಕನ್ನಡಿಗರು ಒಟ್ಟಾಗಿ ನಿಂತು ಕರ್ನಾ ಟಕದ ಜತೆ ಸೇರುವ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಅಲ್ಲಿನ ಗ್ರಾಮ ಪಂಚಾಯಿತಿ ಗಳು ಈ ನಿರ್ಣಯ ಕೈಗೊಳ್ಳುತ್ತಲೇ ಬೆಚ್ಚಿಬಿದ್ದ ಮಹಾರಾಷ್ಟ್ರದ ಮುಖಂಡರು ವರಸೆ ಬದಲಾಯಿಸಿಕೊಂಡಿದ್ದಾರೆ.
ಅಲ್ಲಿನ ಮುಖ್ಯಮಂತ್ರಿ ಏಕನಾಥ ಶಿಂದೆ ದಿಢೀರನೆ ಜತ್ತದ ಜನರ ಸಂಕಷ್ಟಕ್ಕೆ ಸ್ಪಂದಿಸಿದ ವರಂತೆ, ಕುಡಿಯುವ ನೀರಿನ ಯೋಜನೆ ಗಳಿಗಾಗಿ 2000 ಕೋಟಿ ರುಪಾಯಿಗಳ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಯಾವುದೇ ಸರಕಾರವಿದ್ದರೂ ಭಾಷೆ, ಗಡಿ ವಿಚಾರದಲ್ಲಿ ಕರ್ನಾಟಕದ ಜತೆಗೆ ಜಗಳ ಕಾಯುವುದನ್ನೇ ರೂಢಿಸಿ ಕೊಂಡಿವೆ. ಪ್ರಸ್ತುತ ಕರ್ನಾಟಕದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರಗಳೇ ಇರುವುದರಿಂದ ನಿಜಕ್ಕೂ ಗಡಿ ಸಮಸ್ಯೆಗಳಂತಹ ವಿಚಾರಗಳನ್ನು ಒಮ್ಮತದಿಂದ ಬಗೆಹರಿಸುವುದು ಕಷ್ಟವೇನೂ ಅಲ್ಲ.
ಆದರೂ ರಾಜಕೀಯ ಮುಖಂಡರಿಗೆ, ಪಕ್ಷಗಳಿಗೆ ಸಮಸ್ಯೆ ಬಗೆಹರಿಯುವುದು ಬೇಕಿಲ್ಲ. ಕಾಲಕಾಲಕ್ಕೆ ತಮ್ಮ ಬೇಳೆ ಬೇಯಿಸಿ ಕೊಳ್ಳಲು ಗಡಿ ವಿವಾದವನ್ನು ಕೆದಕುತ್ತಲೇ ಇರುವುದು ಅವರಿಗೆ ಅಭ್ಯಾಸವಾಗಿ ಹೋಗಿದೆ.
ಭಾರತ-ಬಾಂಗ್ಲಾ ದೇಶಗಳು ಒಮ್ಮತದಿಂದ ತಮ್ಮ ಗಡಿ ಗ್ರಾಮಗಳನ್ನು ವಿನಿಮಯ ಮಾಡಿಕೊಂಡು ದೀರ್ಘ ಕಾಲದ ಸಮಸ್ಯೆ ಗಳನ್ನು ಬಗೆಹರಿಸಿಕೊಳ್ಳಲು ಸಾಧ್ಯವಿದ್ದರೆ, ಭಾರತದೊಳಗಿರುವ ಎರಡು ರಾಜ್ಯಗಳಿಗೆ ಏಕೆ ಇದು ಸಾಧ್ಯವಾಗುವುದಿಲ್ಲ? ವಾಸ್ತವದಲ್ಲಿ ಕರ್ನಾಟಕದ ಏಕೀಕರಣವಾಗುವಾಗ ಕರ್ನಾಟಕ ಕಳೆದುಕೊಂಡ ಕನ್ನಡ ಪ್ರದೇಶಗಳೇ ಹೆಚ್ಚಿವೆ. ಅನ್ಯ ರಾಜ್ಯಗಳು ಈ ರೀತಿ ತಮ್ಮ ಪ್ರದೇಶ ಗಳನ್ನು ಕಳೆದುಕೊಂಡಿಲ್ಲ. ಬೆಳಗಾವಿ ವಿಚಾರ ಬಂದಾಗ ಧ್ವನಿ ಎತ್ತುವವರೆಲ್ಲ ಕಾಸರಗೋಡಿನ ವಿಚಾರ ದಲ್ಲಿ ಮೌನ ತಳೆಯುವುದೇಕೆ?