Sunday, 8th September 2024

ನಾಯಕತ್ವ ವಿವಾದದಿಂದ ಕಂಗೆಟ್ಟಿವೆಯೇ ಪಕ್ಷಗಳು ?

ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳಲ್ಲಿ ಪಕ್ಷಗಳ ನಾಯಕತ್ವದ ವಿಷಯ ಮಹತ್ವ ಪಡೆದಿದೆ. ಬಿಜೆಪಿಯಲ್ಲಿನ ನಾಯಕತ್ವ ಬದಲಾವಣೆ ವಿವಾದದ ನಂತರ, ಕಾಂಗ್ರೆಸ್ ಪಕ್ಷದಲ್ಲೂ ನಾಯಕತ್ವದ ಭಿನ್ನಮತ ಮಹತ್ವ ಪಡೆದಿದೆ. ಈ ನಾಯಕತ್ವದ ಸಂಗತಿ ಪಕ್ಷಗಳಿಗೆ ಬಲವಾಗುವುದಕ್ಕಿಂತಲೂ ಬಲಹೀನತೆ ಆಗುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ರಾಜ್ಯದಲ್ಲಿನ ಪ್ರಮುಖ ಮೂರು ಪಕ್ಷಗಳಲ್ಲಿ ಜೆಡಿಎಸ್ ನಾಯಕತ್ವದ ವಿಚಾರದಲ್ಲಿಯೇ ಹಿನ್ನಡೆ ಅನುಭವಿಸುತ್ತಿರುವುದನ್ನು
ಕಾಣಬಹುದು. ಎಚ್‌ಡಿಡಿ – ಎಚ್‌ಡಿಕೆ ಹೊರತಾಗಿ ಆ ಪಕ್ಷದಲ್ಲಿ ಯಾರೂ ಪ್ರಭಾವಿಯಾಗಿ ಬೆಳೆಯಲು ಸಾಧ್ಯವಿಲ್ಲ, ಆದ್ದರಿಂದ ಅದೊಂದು ಕುಟುಂಬ ಆಧಾರದ ಪಕ್ಷ ಎಂಬ ಆರೋಪ ಜನರಿಂದ ಅಗಾಗ್ಗೆ ಕೇಳಿಬರುತ್ತದೆ.

ಇಂಥದೊಂದು ಬೆಳವಣಿಗೆಯ ಲಾಭ ಪಡೆಯುವಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಯಶಸ್ವಿಯಾಗಿವೆ. ಆದರೆ ಪ್ರಸ್ತುತ ಈ ಎರಡೂ ಪಕ್ಷಗಳಲ್ಲಿ ನಡೆಯುತ್ತಿರುವ ಬೆಳವಣಿಗೆ ಎರಡೂ ಪಕ್ಷಗಳು ಒಂದೇ ದಿಕ್ಕಿನಲ್ಲಿ ಸಾಗುತ್ತಿರುವುದನ್ನು ಗಮನಿಸಬಹುದು. ಕಳೆದ ಬಾರಿಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಅನ್ನುವಂಥ ಸ್ಥಿತಿ ನಿರ್ಮಾಣವಾಗಿದ್ದು, ಮೋದಿ ಅಲೆಯ ವರ್ಚಸ್ಸು ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿತು.

ಆದರೆ ಅಧಿಕಾರಕ್ಕಾಗಿ ನಡೆದ ಕಿತ್ತಾಟಗಳು ಪಕ್ಷದ ಮೇಲಿನ ನಂಬಿಕೆಯನ್ನು ಕುಗ್ಗಿಸಿತ್ತು. ಆದರೆ ಅಭಿವೃದ್ಧಿ ಪರ ಯೋಜನೆಗಳು ಎಲ್ಲವನ್ನೂ ಮರೆಸುವಲ್ಲಿ ಯಶಸ್ವಿಯಾದವು. ಇದೀಗ ನಾಯಕತ್ವ ಬದಲಾವಣೆಯ ವಿವಾದ ಜನರಲ್ಲಿ ಮತ್ತೊಮ್ಮೆ ಪಕ್ಷದ ಬಗ್ಗೆ ಅಪನಂಬಿಕೆ ಮೂಡಿಸುವಲ್ಲಿ ಕಾರಣವಾಗುತ್ತಿದೆ. ಅನೇಕ ಕಾರ್ಯಕರ್ತರು, ಸಂಘಟನೆ ನೆರವಿನಿಂದ ಶಿಸ್ತಿನ ಪಕ್ಷವಾಗಿದ್ದ ಬಿಜೆಪಿಯ ಕೆಲವರ ನಡೆ ಇಡೀ ಪಕ್ಷಕ್ಕೆ ಹಾನಿಯುಂಟು ಮಾಡುತ್ತಿದೆ. ಕಾಂಗ್ರೆಸ್ ಸಹ ಭಿನ್ನವಾಗಿಲ್ಲ.

ಜಮೀರ್ ಅಹಮದ್ ನೀಡಿರುವ ಹೇಳಿಕೆಯೊಂದು ಸಂಚಲನ ಸೃಷ್ಟಿಸಿದ್ದು, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಾಯಕತ್ವದ ವಿಚಾರವು ಪಕ್ಷದಲ್ಲಿ ಕೋಲಾಹಲ ಸೃಷ್ಟಿಸಿದೆ. ಒಟ್ಟಾರೆ, ‘ಕಾರ್ಯಕರ್ತರಿಂದ ಪಕ್ಷ’ ಎನ್ನುವ ಮಾತು ಮರೆಯಾಗಿ ‘ನಾಯಕರಿಂದಲೇ ಪಕ್ಷ’ ಎಂಬ ಮಾತು ಮಹತ್ವ ಪಡೆಯುತ್ತಿರುವುದರಿಂದಾಗಿ ಎಲ್ಲಪಕ್ಷಗಳಲ್ಲೂ ನಾಯಕತ್ವದ ಹಪಾಹಪಿ
ಆರಂಭಗೊಳ್ಳುತ್ತಿದೆ.

Leave a Reply

Your email address will not be published. Required fields are marked *

error: Content is protected !!