ಉಡುಪಿ ಜಿಲ್ಲೆಯ ಕಾಪುವಿನ ಜಾತ್ರೆಯಲ್ಲಿ ಮುಸ್ಲಿಂರಿಗೆ ವ್ಯಾಪಾರ ನಿರಾಕರಿಸುತ್ತಿದ್ದಂತೆ ಶಿವಮೊಗ್ಗದಲ್ಲೂ ಮುಸ್ಲಿಂ ವ್ಯಾಪಾರಿಗಳಿಗೆ
ನಿರ್ಬಂಧ ಹೇರಲಾಗಿದೆ. ಯಾವುದೇ ಒಂದು ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಒಂದು ಕೋಮಿನ ಜನರಿಗೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎನ್ನುವ ಧೋರಣೆ ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ವಿರುದ್ಧ ವಾದುದು.
ಇಂಥ ಪ್ರಯತ್ನಗಳು ಒಂದು ವರ್ಗದ ಬದುಕುವ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ. ಆಯಾ ದಿನದ ದುಡಿಮೆ ಯನ್ನು ನೆಚ್ಚಿಕೊಂಡು ಬದುಕುವ ಸಾಮಾನ್ಯರು ಎಲ್ಲ ಧರ್ಮಗಳಲ್ಲೂ ಇದ್ದಾರೆ. ಅಂಥವರನ್ನು ಧರ್ಮದ ಹೆಸರಿನಲ್ಲಿ ಪ್ರತ್ಯೇಕಿಸಿ ದೂರ ಸರಿಸುವುದು ಕಾನೂನಿಗೆ ವಿರುದ್ಧವಾದುದಷ್ಟೇ ಅಲ್ಲ, ಅಮಾನವೀಯವೂ ಹೌದು. ದೇಶದ ಯಾವುದೇ ಭಾಗದಲ್ಲಿ ಹಿಂದೂಗಳಿಗೆ ವ್ಯಾಪಾರ ಮಾಡಲು ಅವಕಾಶವಿರುವಂತೆಯೇ ಮುಸ್ಲಿಂ ಸೇರಿದಂತೆ ಎಲ್ಲ ಧರ್ಮದವರಿಗೂ ಅವಕಾಶವಿದೆ.
ದೇಶದ ಭದ್ರತೆಗೆ, ಜನರ ಆರೋಗ್ಯಕ್ಕೆ ಮಾರಕವಲ್ಲದ ವಸ್ತುಗಳನ್ನು ಯಾರು ಬೇಕಾ ದರೂ ಮಾರಬಹುದು, ಆ ಮೂಲಕ ತಮ್ಮ ಜೀವನ ನಡೆಸಬಹುದು. ಸಂವಿಧಾನ ಕಲ್ಪಿಸಿ ರುವ ಈ ವ್ಯವಸ್ಥೆಗೆ ಯಾರಿಂದಲಾದರೂ ಅಡ್ಡಿಯುಂಟಾದರೆ ಅಂಥವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು. ಮುಸ್ಲಿಂ ಸಮು ದಾಯದವರಿಗೆ ವ್ಯಾಪಾರ ಮಾಡಲು ಅವಕಾಶ ಕೊಡುವುದಿಲ್ಲ ಎನ್ನುವ ಯೋಚನೆಯ ಹಿಂದೆ ಯಾರಿದ್ದಾರೋ ಗೊತ್ತಿಲ್ಲ. ಆದರೆ ಯಾರೇ ಇದ್ದರೂ ಅಂಥ ಪ್ರಯತ್ನಗಳನ್ನು ಸರಕಾರ ಆರಂಭದಲ್ಲಿಯೇ ಚಿವುಟಿ ಹಾಕಬೇಕು.
ಧಾರ್ಮಿಕ ಅಸಹನೆಯನ್ನು ಬಿತ್ತುವವರ ವಿರುದ್ಧ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ಜರುಗಿಸಬೇಕು. ಒಂದೆಡೆ ಸರಕಾರ ಜಗತ್ತಿನ ಮುಸ್ಲಿಂ ರಾಷ್ಟ್ರಗಳಿಗೆ ಭಾರತದಲ್ಲಿ ಹೂಡಿಕೆ ಮಾಡಿ, ವ್ಯಾಪಾರ- ವ್ಯವಹಾರಕ್ಕೆ ಆಹ್ವಾನ ನೀಡುತ್ತಿರುವ ಹೊತ್ತಿನಲ್ಲಿ, ಜಾತ್ರೆ-ಸಮಾರಂಭಗಳಲ್ಲಿ ವ್ಯಾಪಾರ-ವಹಿವಾಟಕ್ಕೆ ನಿಷೇಧ ಹೇರುವುದು ಏನನ್ನು ಸೂಚಿಸುತ್ತದೆ ಎಂಬುದನ್ನು ನಿಷೇಧ ಹೇರುವವರು ಅರ್ಥ ಮಾಡಿಕೊಳ್ಳಬೇಕು. ನಾಡಿನ ಅನೇಕ ಜಾತ್ರೆಗಳು ಧಾರ್ಮಿಕ ಸಾಮರಸ್ಯದಿಂದ ನಡೆಯುತ್ತವೆ.
ಹಿಂದೂ ಮತ್ತು ಮುಸ್ಲಿಂ ಎರಡೂ ಸಮುದಾಯಗಳು ಬೆರೆತು ಜಾತ್ರೆಗಳು, ಧಾರ್ಮಿಕ ಆಚರಣೆಗಳ ಶೋಭೆ ಹೆಚ್ಚಿಸುತ್ತವೆ. ಅಂಥ ಸಾಮರಸ್ಯವನ್ನು ಕದಡುವ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರವೃತ್ತಿ ಇಲ್ಲಿಗೇ ಕೊನೆಯಾಗಬೇಕು. ಇಲ್ಲವಾದರೆ ಇದು ಮುಂದೊಂದು ದಿನ ಹಿಜಾಬ್ ರೀತಿಯೇ ರಾಜ್ಯಾದ್ಯಂತ ಕಿಚ್ಚು ಹಚ್ಚುವುದರಲ್ಲಿ ಅನುಮಾನವೇ ಇಲ್ಲ.