Sunday, 15th December 2024

ಸೀಟು ಹಂಚಿಕೆಯಲ್ಲಿ ಗೊಂದಲವಾಗದಿರಲಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಿದ ೨೦೨೪ರ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ.

ಏಪ್ರಿಲ್ ೧೮ ಮತ್ತು ೧೯ರಂದು ನಡೆದ ಪರೀಕ್ಷೆಯಲ್ಲಿ ಶೇ. ೨೫ರಷ್ಟು ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಕೇಳುವ ಮೂಲಕ ಕೆಇಎ ವಿದ್ಯಾರ್ಥಿಗಳು ಮತ್ತು ಪೋಷಕರ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ನಾಲ್ಕು ವಿಷಯ ಗಳಲ್ಲಿ ಒಟ್ಟು ೫೦ ಪ್ರಶ್ನೆಗಳನ್ನು ಕೈಬಿಟ್ಟು ಎರಡು ವಿಷಯಗಳಲ್ಲಿ ತಲಾ ಒಂದರಂತೆ ಕೃಪಾಂಕಗಳನ್ನು ನೀಡಿ ಫಲಿತಾಂಶ ಪ್ರಕಟಿಸಿದೆ. ಈ ಕ್ರಮದಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂಬ ದೂರುಗಳಿದ್ದರೂ, ಸದ್ಯಕ್ಕೆ ಇದೊಂದೇ ಪರಿಹಾರವಾಗಿತ್ತು.

ಇನ್ನು ಮುಂದೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಡಿಪಾಯವಾದ ಸಿಇಟಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಯಾವುದೇ ಗೊಂದಲಕ್ಕೆ ಆಸ್ಪದ ವಿಲ್ಲದಂತೆ ನಡೆಸುವ ಜವಾಬ್ದಾರಿ ಪ್ರಾಧಿಕಾರದ ಮೇಲಿದೆ. ಈ ವರ್ಷ ದಾಖಲೆಯ ೩,೪೯,೬೫೩ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು ಈ ಪೈಕಿ ೩,೧೦,೩೧೪ ಮಂದಿ ರ‍್ಯಾಂಕ್‌ಗೆ ಅರ್ಹರಾಗಿದ್ದಾರೆ. ಅರ್ಹತೆ ಪಡೆದವರಲ್ಲಿ ೧,೩೯,೨೭೪ ವಿದ್ಯಾರ್ಥಿಗಳು ಮತ್ತು ೧,೭೧,೦೪೦ ವಿದ್ಯಾರ್ಥಿನಿಯರಿzರೆ. ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ವೃತ್ತಿಪರ ಕೋರ್ಸುಗಳತ್ತ ಗಮನಹರಿಸುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ಈ ವರ್ಷ ಒಟ್ಟು ೨,೭೪,೫೯೫ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸ್ ಸೇರಲು ಅರ್ಹರಾಗಿದ್ದಾರೆ.

ಈ ಪೈಕಿ ನೀಟ್ ಪರೀಕ್ಷೆ ಬರೆದು ವೈದ್ಯಕೀಯ ಕೋರ್ಸು ಮಾಡ ಬಯಸಿರುವ ವಿದ್ಯಾರ್ಥಿಗಳೂ ಸೇರಿzರೆ. ಇಷ್ಟೊಂದು ಸಂಖ್ಯೆಯ ಆಕಾಂಕ್ಷಿಗಳಿಗೆ ತಮಗೆ ಬೇಕಾದ ಕಾಲೇಜಿನಲ್ಲಿ, ಬೇಕಾದ ಕೋರ್ಸುಗಳನ್ನು ಪಡೆಯುವುದು ಸವಾಲಿನ ಕೆಲಸ. ಆದರೆ ತಮಗೆ ಬೇಕಾದ ಕಾಲೇಜಿನಲ್ಲಿಯೇ, ಕಡಿಮೆ ರ‍್ಯಾಂಕಿಂಗ್‌ ನಲ್ಲಿ ಸಿಗುವ ಬೇರೆ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದೇ ರೀತಿ ತಮ್ಮ ರ‍್ಯಾಂಕಿಂಗ್‌ನಡಿ ಬರುವ ಅನ್ಯಕಾಲೇಜುಗಳಲ್ಲಿ ತಾವು ಇಷ್ಟಪಟ್ಟ ಕೋರ್ಸು ಆಯ್ಕೆ ಮಾಡಿಕೊಳ್ಳಬಹುದು. ಈ ಆಯ್ಕೆ ಪ್ರಕ್ರಿಯೆಯ ಬಗ್ಗೆ, ಕಾಲೇಜುಗಳ ಗುಣಮಟ್ಟದ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಿಳಿವಳಿಕೆ ನೀಡುವ ಕೆಲಸವನ್ನು ಕೆಇಎ ಮಾಡಬೇಕಿದೆ. ಕೆಲವು ಎಂಜಿನಿಯರಿಂಗ್ ಕಾಲೇಜುಗಳು ಸಿಇಟಿ ಯಡಿ ಸೀಟು ಸಿಗುವ ಸಾಧ್ಯತೆ ಇದ್ದರೂ ಮ್ಯಾನೇಜ್‌ ಮೆಂಟ್  ಕೋಟಾದಡಿ ಸೇರಲು ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತಿರುವ ದೂರುಗಳಿವೆ.

ಇಂತಹ ಕಾಲೇಜುಗಳಿಗೆ ಎಚ್ಚರಿಕೆ ನೀಡಿ, ವಿದ್ಯಾರ್ಥಿಗಳ ಹಿತಕಾಯುವ ಜವಾಬ್ದಾರಿಯೂ ಪ್ರಾಽಕಾರ ಮತ್ತು ಶಿಕ್ಷಣ ಇಲಾಖೆ ಮೇಲಿದೆ.