ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕಿನ ಆರು ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. ಇನ್ನೊಂದೆಡೆ ಒಡಿಶಾದಲ್ಲಿ ೧೩೨ ಜನರಲ್ಲಿ ಸ್ಕ್ರಬ್ ಟೈಫಸ್ ಎಂಬ ಸೋಂಕು ಜ್ವರ ಕಾಣಿಸಿಕೊಂಡಿದ್ದು, ಈವರೆಗೆ ಆರು ಮಂದಿ ಮೃತಪಟ್ಟಿ ದ್ದಾರೆ.
ಮತ್ತೊಂದೆಡೆ ಮಹಾರಾಷ್ಟ್ರದ ಕೊಪುರ ಜಿಲ್ಲೆಯ ಇಚಲಕರಂಜಿಯಲ್ಲಿ ಎರಡು ಝಿಕಾ ವೈರಸ್ ಪ್ರಕರಣಗಳು ವರದಿಯಾಗಿವೆ. ಹಣ್ಣು ತಿನ್ನುವ ಬಾವಲಿಗಳ ಪ್ರಭೇದಕ್ಕೆ ಸೇರಿದ ಫ್ಲೈಯಿಂಗ್ ಫಾಕ್ಸ್ ಬಾವಲಿಗಳಲ್ಲಿ ನಿಫಾ ವೈರಾಣು ಇರುತ್ತದೆ ಮತ್ತು ಆ ಬಾವಲಿಗಳಿಂದಲೇ ಇದು ಹರಡುತ್ತದೆ ಎಂಬುದು ಈಗಾಗಲೇ ಪತ್ತೆಯಾಗಿದೆ. ಇನ್ನು ಮನುಷ್ಯರಿಗೆ ಚಿಗಟ ಕಚ್ಚಿದರೆ ಸ್ಕ್ರಬ್ ಟೈಫಸ್ ಜ್ವರ ಹರಡುತ್ತದೆ ಎನ್ನಲಾಗಿದೆ. ಈಡಿಸ್ ಸೊಳ್ಳೆಯ ಕಚ್ಚುವಿಕೆಯ ಮೂಲಕ ಝಿಕಾ ವೈರಸ್ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಈ ಮೂರೂ ರೀತಿಯ ಸೋಂಕುಗಳು ಹರಡುವುದಕ್ಕೆ ಅರಣ್ಯ ನಾಶ, ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಒಡನಾಟ ಹೆಚ್ಚಳ, ಜನಸಂಖ್ಯೆ ಏರಿಕೆ ಮತ್ತು ಹವಾಮಾನ ಬದಲಾವಣೆಯೇ ಕಾರಣ ಎಂಬುವುದು ಗಮನಿಸಬೇಕಾದ ಅಂಶ.
ಇವಷ್ಟೇ ಅಲ್ಲ, ಈ ಹಿಂದೆ ಹಾವಳಿ ಎಬ್ಬಿಸಿದ್ದ ಮಂಗನ ಕಾಯಿಲೆ, ರೇಬೀಸ್, ಕ್ಷಯ, ಪ್ಲೇಗ್ ಸೇರಿದಂತೆ ೧೫೦ ರೋಗಗಳು ಹುಟ್ಟಿಕೊಳ್ಳುವುದಕ್ಕೆ ಪ್ರಾಣಿಗಳೇ ಕಾರಣವೆಂಬುದು ಗಮನಿಸಬೇಕಾದ ಅಂಶ. ಭೂಪ್ರದೇಶದ ಅರ್ಧದಷ್ಟು ಅರಣ್ಯವಿದ್ದರೆ ಮಾತ್ರ ಜೀವಸಂಕುಲಕ್ಕೆ ಅನುಕೂಲಕರವಾದ ವಾತಾವರಣ ಸೃಷ್ಟಿಯಾಗುತ್ತದೆ. ಆದರೆ ಈಗ ದೇಶದಲ್ಲಿ ಶೇ.೧೯ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಮಾನವನ ದುರಾಸೆಗೆ ಪ್ರಕೃತಿ ನಾಶವಾಗುತ್ತಿರುವ ಪರಿಣಾಮವೇ ಹವಾಮಾನದಲ್ಲೂ ಬದಲಾವಣೆ ಯಾಗುತ್ತಿದೆ. ಯಾವುದೇ ಒಂದು ಸಾಂಕ್ರಾಮಿಕ ಕಾಯಿಲೆಯನ್ನು ಬರದಂತೆ ತಡೆಯಲು ಕೈಗೊಳ್ಳಬೇಕಾದ ಮೊದಲ ಕ್ರಮ ಎಂದರೆ ಅದು ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಸ್ವಚ್ಛತೆಯನ್ನು ನಿರ್ವಹಣೆ ಮಾಡುವುದು.
ಸುತ್ತಲಿನ ವಾತಾವರಣ ಸ್ವಚ್ಛವಾಗಿದ್ದರೆ ಸೊಳ್ಳೆಗಳು ಹುಟ್ಟಿಕೊಳ್ಳುವುದಿಲ್ಲ. ನಮ್ಮ ಸುತ್ತಮುತ್ತಲಿನ ಪರಿಸರದ ಜತೆಗೆ ನಾವೂ ಕೂಡ ಸ್ವಚ್ಛವಾಗಿರುವುದು
ಬಹು ಮುಖ್ಯ. ಇನ್ನು ಪ್ರಾಣಿಗಳೊಂದಿಗಿನ ಒಡನಾಟವೂ ಕಡಿಮೆ ಇದ್ದಷ್ಟು ಅನಾರೋಗ್ಯದಿಂದ ದೂರವಿರಬಹುದು. ಯಾವುದೇ ಒಂದು ರೋಗವನ್ನು ಮೂಲದಲ್ಲೇ ಚಿವುಟಬೇಕಾದರೆ ಇವೆಲ್ಲವನ್ನೂ ಪಾಲಿಸುವುದು ಅಗತ್ಯ.