Sunday, 1st December 2024

ಖಲಿಸ್ತಾನಿ ಶಕ್ತಿಗಳ ಜಯ ಆತಂಕದ ವಿಚಾರ

೧೮ನೇ ಲೋಕಸಭೆಗೆ ಆಯ್ಕೆಯಾದ ೫೪೩ ಸಂಸದರಲ್ಲಿ ೨೫೧ ಮಂದಿ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ ಎಂದು ದೇಶದ ಪ್ರಜಾಸತ್ತೆಯ ಸುಧಾರಣೆಗೆ ಹೋರಾಡುತ್ತಿರುವ ಎಡಿಆರ್ ಸಂಘಟನೆ ತಿಳಿಸಿದೆ. ಪ್ರಜಾ ಪ್ರಭುತ್ವದ ದೇಗುಲದಲ್ಲಿ ಧನಿಕರು ಮತ್ತು ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಹಾಜರಿ ಹೆಚ್ಚುತ್ತಲೇ ಸಾಗಿದೆ. ಈ ಚುನಾವಣೆಯಲ್ಲಿ ಪಂಜಾಬ್‌ನಿಂದ ದೇಶದ್ರೋಹದ ಆರೋಪ ಎದುರಿಸುತ್ತಿರುವ ಇಬ್ಬರು ಖಲಿಸ್ತಾನಿ ಬೆಂಬಲಿಗರು ಸಂಸತ್ತಿಗೆ ಆಯ್ಕೆಯಾಗಿರುವುದು ಕಳವಳಕಾರಿ ವಿಚಾರ.

ಇದಲ್ಲದೆ ಉಗ್ರರಿಗೆ ಹಣಕಾಸು ನೆರವು ನೀಡುತ್ತಿರುವ ಆರೋಪದ ಮೇಲೆ ಬಂಧಿತ ಮಾಜಿ ಶಾಸಕ ಅಬ್ದುಲ್ ರಶೀದ್ ಜೈಲಿನಲ್ಲಿದ್ದುಕೊಂಡೇ ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. ಪಂಜಾಬ್ ರಾಜ್ಯದಲ್ಲಿ ಖಲಿಸ್ತಾನಿ ಪರ ಸಂಘಟನೆಗಳು ಮತ್ತೆ ಸಕ್ರಿಯ ವಾಗಿರುವುದು ನಿಜಕ್ಕೂ ಚಿಂತಿಸಬೇಕಾದ ವಿಚಾರ. ಈ ಶಕ್ತಿಗಳು ಕೆನಡಾ ಸೇರಿದಂತೆ ವಿದೇಶಗಳಲ್ಲಿ ದೇಣಿಗೆ ಸಂಗ್ರಹಿಸುವುದರ ಜೊತೆಗೆ ದೇಶ ವಿರೋಧಿ ಶಕ್ತಿಗಳಿಗೆ ಬೆಂಬಲ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಕೃಷಿ ಕಾಯಿದೆಯನ್ನು ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸಿದ ಪ್ರತಿಭಟನೆಯಲ್ಲಿ ಖಲಿಸ್ತಾನಿ ಪರ ಶಕ್ತಿಗಳೂ ಭಾಗವಹಿಸಿದ್ದವು ಎಂಬ ದೂರುಗಳು ಕೇಳಿ ಬಂದಿದ್ದವು. ಇದೀಗ ಭಾರತದ ಸಂವಿಧಾನ ಮತ್ತು ಸಾರ್ವಭೌಮತೆಯಲ್ಲಿ ನಂಬಿಕೆ ಇಲ್ಲ ಎಂದು ಸಾರಿದ ಇಬ್ಬರು ಖಲಿಸ್ತಾನಿವಾದಿಗಳು ಸಂಸತ್ತು ಪ್ರವೇಶಿಸಲು ಸಜ್ಜಾಗಿದ್ದಾರೆ. ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿತ ಅಮೃತ್ ಪಾಲ್ ಸಿಂಗ್ ಜೈಲಿನಲ್ಲಿದ್ದು ಕೊಂಡೇ ಪಂಜಾಬಿನ ಖಾಡುರ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾನೆ. ಈತ ಪಂಜಾಬಿನ ಉಳಿದ ಎಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚು ೧,೯೭,೧೨೦ ಮತಗಳ ಅಂತರದಲ್ಲಿ ಗೆದ್ದಿರುವುದು ಉಲ್ಲೇಖನೀಯ ಅಂಶ.

ಫರೀದ್‌ಕೋಟ್ ಕ್ಷೇತ್ರದಿಂದ ಗೆದ್ದಿರುವ ಸರಬ್‌ಜಿತ್ ಸಿಂಗ್ ಖಾಲ್ಸಾ ಮಾಜಿ ಪ್ರಧಾನಿ ಇಂದಿರಾಗಾಂಧಿ ಹಂತಕ ಬಿಯಾಂತ್‌ಸಿಂಗ್ ಪುತ್ರ. ಇವರಿಬ್ಬರಿಗೂ ಕೆನಡಾ ಮೂಲದ ನಿಷೇಧಿತ ‘ಸಿಖ್ಸ್ ಫಾರ್ ಜಸ್ಟೀಸ್’ ಸಂಘಟನೆ ಹಣಕಾಸು ನೆರವು ನೀಡಿದೆ ಎನ್ನಲಾಗುತ್ತಿದೆ. ಇವರಿಬ್ಬರಲ್ಲದೆ ಶಿರೋಮಣಿ ಅಕಾಲಿದಳದ ಮಾಜಿ ಸಂಸದ ಸಿಮ್ರಾನ್‌ಜಿತ್ ಸಿಂಗ್ ಮಾನ್ ಸೇರಿದಂತೆ ಏಳು ಮಂದಿ ಖಲಿಸ್ತಾನ್ ಬೆಂಬಲಿಗ ಅಭ್ಯರ್ಥಿಗಳು ಈ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. ಆರಿಸಿ ಬಂದರೆ ಕ್ಷೇತ್ರದಲ್ಲಿ ಹೇರ್ ಸೆಲೂನ್ಗಳನ್ನು, ಬ್ಯೂಟಿಪಾರ್ಲರ್‌ಗಳನ್ನು, ಮದ್ಯ ಮತ್ತು ಮಾಂಸದಂಗಡಿಗಳನ್ನು ಮುಚ್ಚಿಸುವುದಾಗಿ, ಸಿಖ್ ಯುವಕರಿಗೆ ಶಸ್ತಾಸ ತರಬೇತಿ ನೀಡುವುದಾಗಿ ಅಮೃತ್‌ಪಾಲ್ ಸಿಂಗ್ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ.

ಒಂದೆಡೆ ಭಾರತವನ್ನು ತನಗೆ ‘ಬೆದರಿಕೆ ಯಾಗಿರುವ’ ರಾಷ್ಟ್ರ ಎಂದು ಪರಿಗಣಿಸಿರುವ ಕೆನಡಾ ಮತ್ತು ಪಾಕಿಸ್ತಾನದ ಐಎಸ್‌ಐ ಗುಪ್ತಚರ ಸಂಸ್ಥೆ ಖಲಿಸ್ತಾನಿ ಶಕ್ತಿಗಳಿಗೆ ಬೆಂಬಲ ನೀಡುತ್ತಿವೆ. ಇನ್ನೊಂದೆಡೆ ಈ ಶಕ್ತಿಗಳು ಹಲವು ವರ್ಷಗಳ ಬಳಿಕ ಭಾರತದಲ್ಲಿ ನೆಲೆ ಕಂಡುಕೊಳ್ಳುತ್ತಿವೆ. ಪಂಜಾಬಿನಲ್ಲಿ ಮತ್ತೆ ಹಿಂಸೆ ಮತ್ತು ಅಸ್ಥಿರತೆ ತಲೆ ಎತ್ತದಂತೆ ನೋಡಿಕೊಳ್ಳಬೇಕಾಗಿದೆ. ದೇಶದ ಸಮಗ್ರತೆ ಮತ್ತು ಏಕತೆ ವಿಚಾರದಲ್ಲಿ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ನಿರ್ಧಾರ ಕೈಗೊಳ್ಳಬೇಕು.