ರಾಜ್ಯದಲ್ಲಿ ಮತ್ತೆ ಗುತ್ತಿಗೆದಾರರ ಸಂಘರ್ಷ ಆರಂಭಗೊಂಡಿದೆ. ಕಳೆದ ಸರಕಾರದ ಅವಧಿಯ ಕೊನೆಯಲ್ಲಿ ರಾಜ್ಯಾದ್ಯಂತ ಗುಲ್ಲೆಬ್ಬಿಸಿದ್ದ ಶೇ.೪೦ ಕಮಿಷನ್ ಆರೋಪದ ಮೂಲವೇ ಈ ವರ್ಗವಾಗಿತ್ತು. ಇದೇ ಪ್ರಕರಣದಲ್ಲಿ ಗುತ್ತಿಗೆದಾರ ಸಂತೋಷ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದೂ ಅಲ್ಲದೇ, ಸಚಿವ ಈಶ್ವರಪ್ಪ ರಾಜೀನಾಮೆಯನ್ನೂ ಕೊಡಬೇಕಾಗಿ ಬಂದಿತ್ತು. ಇದೀಗ ಕಾಂಗ್ರೆಸ್ ಅಧಿಕಾರಕ್ಕೇರಿದ ೩ ತಿಂಗಳಲ್ಲೇ ಪುನಃ ಕಮಿಷನ್ ಆರೋಪ ಕೇಳಿಬಂದಿದ್ದು, ನಿರ್ಲಕ್ಷಿಸುವ ಸಂಗತಿಯಂತೂ ಅಲ್ಲ.
ಭ್ರಷ್ಟಾಚಾರದ ಬೇರಡಗಿರುವುದೇ ಸರಕಾರಿ ಕಾಮಗಾರಿಯಲ್ಲಿ, ಅದನ್ನು ನಿರ್ವಹಿಸುವ ಗುತ್ತಿಗೆದಾರರಲ್ಲಿ. ನಿರ್ದಿಷ್ಟ ವಿದ್ಯಾರ್ಹತೆ, ಹೆಚ್ಚಿನ ಪರಿಶ್ರಮದ ಅಗತ್ಯವಿಲ್ಲ ಎಂಬಂತಿರುವ ಈ ವೃತ್ತಿಯಲ್ಲಿ ಬೇಗ ಹಣ ಗಳಿಸ ಬಹುದೆಂಬ ಕಾರಣಕ್ಕೆ ಹೆಚ್ಚು ಮಂದಿ ಆಕರ್ಷಿತರಾಗುತ್ತಿದ್ದಾರೆ. ಎಂಥದ್ದೇ ಪ್ರಾಮಾಣಿಕ ಗುತ್ತಿಗೆದಾರ ನಾದರೂ ನೂರಕ್ಕೆ ನೂರರಷ್ಟು ಹಣ ವನ್ನು ಕಾಮಗಾರಿಗಳಲ್ಲಿ ವಿನಿಯೋಗಿಸುತ್ತಾನೆಂಬುದನ್ನು ನಂಬುವ ಸ್ಥಿತಿ ಇಲ್ಲ. ಕೊನೆಪಕ್ಷ ಕೆಲಸ ಮಾಡಿ ಕೊಟ್ಟರಾಯಿತು ಎಂಬಷ್ಟರ ಮಟ್ಟಿಗೆ ಇಂಥ ಭ್ರಷ್ಟಾಚಾರವನ್ನೂ ನಾವು ಒಪ್ಪಿಕೊಂಡಿ ದ್ದೇವೆ.
ಇದನ್ನರಿತೇ ರಾಜಕೀಯ ಪಕ್ಷಗಳು, ನಾಯಕರು ಸಹ ಚುನಾವಣೆ-ಚುನಾವಣೋತ್ತರ ಸನ್ನಿವೇಶದ ನಿರ್ವಹಣೆಯ‘ಗುತ್ತಿಗೆ’ ಯನ್ನೂ ಇಂಥ ಗುತ್ತಿಗೆದಾರರ ಮೇಲೇ ಹೇರುತ್ತಿದ್ದಾರೆ. ತಕ್ಷಣದ ‘ಸಂಪನ್ಮೂಲ ಕ್ರೋಡೀಕರಣ’ಕ್ಕೆ ಗುತ್ತಿಗೆದಾರರೇ ರಾಜಕೀಯ ನಾಯಕರ ಪಾಲಿನ ಗಣಿ. ಇನ್ನು ಕಾಮಗಾರಿಗಳ ಕಚ್ಚಾ ಸಾಮಗ್ರಿಗಳ ದರ ವೈಜ್ಞಾನಿಕವಾಗಿ ನಿಗದಿಯಾಗುತ್ತಿಲ್ಲ. ಮೋರಂ ಸಾಮಗ್ರಿ ಗಳನ್ನು ಸಂಗ್ರಹಿಸಲು ನಿಗದಿತ ಸರಕಾರಿ ಜಾಗಗಳನ್ನು ಗುರುತಿಸಲಾಗುವು ದಿಲ್ಲ. ಬೊಕ್ಕಸದಲ್ಲಿ ಅನುದಾನಕ್ಕೆ ಅಗತ್ಯ ಹಣ ಇರಲಿ, ಇಲ್ಲದಿರಲಿ, ರಾಜಕೀಯ ಕಾರಣಗಳಿಗಾಗಿ ಟೆಂಡರ್ ಕರೆಯಲಾಗುತ್ತಿದೆ.
ಕೆಲವೊಮ್ಮೆ ಟೆಂಡರ್ ಕರೆಯದೇ ಕಾಮಗಾರಿ ಮುಗಿಸುವಂತೆ ಮೌಖಿಕ ಆದೇಶಗಳೂ ಆಗುತ್ತವೆ. ಕಾಮಗಾರಿ ಅವಧಿ ನಿಗದಿಯೂ ಸ್ಥಳೀಯ ಸಮಸ್ಯೆಗಳನ್ನು ಆಧರಿಸಿ ಆಗುತ್ತಿಲ್ಲ. ಬೇರೆಬೇರೆ ಕಾರಣಗಳಿಗಾಗಿ ಕಾಮಗಾರಿ ವಿಳಂಬವಾದಲ್ಲಿ, ರಾಜಕೀಯ ಪೂರ್ವಗ್ರಹದ ಕಾರಣಕ್ಕೆ ವಿಪರೀತ ದಂಡ ವಿಧಿಸ ಲಾಗುತ್ತದೆ ಇಲ್ಲವೇ, ಬಿಲ್ ಪಾವತಿ ವಿಳಂಬವಾಗುತ್ತದೆ. ಕೆಲವೊಮ್ಮೆ ಪೂರ್ಣ ಬಿಲ್ ಪಾವತಿಯಾಗದ ಸನ್ನಿವೇಶ ಗಳೂ ಇವೆ. ನಾನಾ ಇಲಾಖೆಗಳ ಕಾಮಗಾರಿಗಳ ಪ್ಯಾಕೇಜ್ ಸಂದರ್ಭದಲ್ಲಿ ಸಂವಹನವೇ ಬಹುದೊಡ್ಡ ತಲೆನೋವು. ಇವೆಲ್ಲದರ ನಡುವೆ ಹೆಚ್ಚುತ್ತಿರುವ ಪೈಪೋಟಿಯನ್ನು ಎದುರಿಸಿ ಸರಕಾರಿ ಕಾಮಗಾರಿಗಳ ಟೆಂಡರ್ ದಕ್ಕಿಸಿ ಕೊಳ್ಳುವ ಗುತ್ತಿಗೆದಾರ ‘ಭ್ರಷ್ಟನಾಗದೇ’ ಉಳಿಯಲು ಸಾಧ್ಯವೇ ಇಲ್ಲ ಎಂಬಂಥ ಸ್ಥಿತಿ ಇದೆ.
ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸರಕಾರಿ ಕಾಮಗಾರಿಗಳ ವಿಚಾರದಲ್ಲಿ ನಿರ್ದಿಷ್ಟ ಮಾನದಂಡಗಳೊಂದಿಗೆ ಪಾರದರ್ಶಕವಾದ ಪ್ರತ್ಯೇಕ ನೀತಿ ಯೊಂದರ ಜಾರಿ ಅತ್ಯಗತ್ಯ.