ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಸಚಿವರ ಕಾರು ಹರಿದು ಸತ್ತಿದ್ದಾರೆ. ರಾಮನ ರಾಜ್ಯವಾಗಿದ್ದ ಉತ್ತರ ಪ್ರದೇಶ ಈಗ ರಾವಣನ ರಾಜ್ಯವಾಗಿದೆ.
ಹಿಂಸಾಚಾರವನ್ನು ಯಾರೇ ಮಾಡಿರಲಿ, ಅದನ್ನು ಸಮರ್ಥಿಸಲು ಸಾಧ್ಯವಿಲ್ಲ. ತಾವು ನಡೆಸುತ್ತಿರುವ ಪ್ರತಿ ಭಟನೆ ಶಾಂತಿಯುತವಾಗಿ ಇರುವಂತೆ ರೈತರೂ ನೋಡಿಕೊಳ್ಳಬೇಕು, ಕಾನೂನು- ಸುವ್ಯವಸ್ಥೆ ಪರಿಸ್ಥಿತಿ ಕೈಮೀರದಂತೆ ಸರಕಾರವೂ ಎಚ್ಚರ ವಹಿಸಬೇಕು. ಲಖೀಂಪುರ ಖೇರಿ ಜಿಲ್ಲೆಯಲ್ಲಿ ನಡೆದ ದುರ್ಘಟನೆಯಲ್ಲಿ ಎರಡೂ ಕಡೆಯವರು ಆವೇಶ ಮತ್ತು ಎಚ್ಚರಗೇಡಿಗಳಾಗಿ ವರ್ತಿಸಿದಂತೆ ಕಾಣುತ್ತಿದೆ. ಕಪ್ಪುಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ರೈತರ ಗುಂಪಿನ ಮಧ್ಯೆಯೇ ಸಚಿವರ ಬೆಂಗಾವಲಿನ ವಾಹನಗಳು ಅಪಾಯಕಾರಿ ಯಾಗಿ ಚಲಿಸುತ್ತಿರುವುದು ವಿಡಿಯೊ ಚಿತ್ರಗಳಲ್ಲಿ ಸ್ಪಷ್ಟವಾಗಿದೆ.
ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರೆ ಗಂಭೀರ ಪರಿಣಾಮ ಎದುರಿಸ ಬೇಕಾಗುತ್ತದೆ ಎಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಎಚ್ಚರಿಕೆ ಕೊಟ್ಟಿದ್ದುದು ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿ ಯಾಗಿತ್ತು. ಅಧಿಕಾರದಲ್ಲಿ ಇರುವವರು ನಡೆ-ನುಡಿಯಲ್ಲಿ ಸಂಯಮ ಕಾಯ್ದುಕೊಳ್ಳುವುದು ಅಗತ್ಯ. ಸಚಿವರ ಈ ಹೇಳಿಕೆಯು ರೈತರನ್ನು ಪ್ರಚೋದಿಸಿರಬಹುದು. ಹಾಗೆಂದು ಹಿಂಸಾಚಾರ ಮತ್ತು ವಾಹನಕ್ಕೆ ಬೆಂಕಿ ಹಚ್ಚಿ ಜನರ ಕೊಲೆಗೆ ಕಾರಣರಾಗಿರುವ ಕೃತ್ಯವನ್ನು ಸಮರ್ಥಿಸಲು ಸಾಧ್ಯವೇ ಇಲ್ಲ. ಇದು ತೀವ್ರ ಖಂಡನೀಯ.
ಘಟನೆಯ ಬಳಿಕ ಪರಿಸ್ಥಿತಿ ಕೈಮೀರದಂತೆ ಶತಪ್ರಯತ್ನ ನಡೆಸಿರುವ ಉತ್ತರಪ್ರದೇಶ ಸರ್ಕಾರವು ಮೃತಪಟ್ಟ ನಾಲ್ವರು ರೈತರ ಕುಟುಂಬಗಳಿಗೆ ತಲಾ 45 ಲಕ್ಷ ರು. ಮತ್ತು ಗಾಯಗೊಂಡವರಿಗೆ ತಲಾ 10 ಲಕ್ಷ ರು. ಪರಿಹಾರವನ್ನು ಪ್ರಕಟಿಸಿದೆ. ಘಟನೆಯ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸುವುದಾಗಿಯೂ ಸರ್ಕಾರ ಭರವಸೆ ನೀಡಿದೆ. ಈ ಹಿಂಸಾಕೃತ್ಯದ ಬಗ್ಗೆ ಸಮಗ್ರ ತನಿಖೆಯಾಗಬೇಕು. ನಿಜಾಂಶ ಆದಷ್ಟು ಬೇಗ ಹೊರಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.