Thursday, 12th December 2024

ಜನಪ್ರತಿನಿಧಿಗಳು ಜನರಿಗೆ ಮಾದರಿಯಾಗುವಂತಿರಬೇಕು

ಪ್ರಜಾಪ್ರಭುತ್ವ ವ್ಯವಸ್ಥೆಯ ಜನಪ್ರತಿನಿಽಗಳಾದವರಿಗೆ ತಮ್ಮದೇ ಆದ ಗೌರವವಿದೆ. ಗ್ರಾಮ ಪಂಚಾಯಿತಿ ಸದಸ್ಯರಿಂದ ಹಿಡಿದು ಸಂಸದರ ತನಕ ತಮ್ಮದೇ ಆದ ಸ್ಥಾನಮಾನವಿದೆ. ಇಂತಹ ಮಹತ್ವದ ಜವಾಬ್ದಾರಿ ಹೊತ್ತಿರುವವರು ಜನರಿಗೆ ಮಾದರಿಯಾಗುವಂತಿರಬೇಕು. ಆದರೆ ಇತ್ತೀಚಿಗೆ ಜನರು ಜನಪ್ರತಿನಿಧಿಗಳನ್ನು ನೋಡಿದರೆ, ತಲೆ ತಗ್ಗಿಸುವಂತೆ ರೀತಿ ನಡೆದುಕೊಳ್ಳುತ್ತಿದ್ದಾರೆ.

ಮಂಗಳವಾರ ಯಾದಗಿರಿಯಲ್ಲಿ ನಡೆದ ಬಿಜೆಪಿ ಜನಾಶೀರ್ವಾದ ಯಾತ್ರೆಯಲ್ಲಿ, ನೂತನ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರನ್ನು ಬಂದೂಕು, ಗಾಳಿಯಲ್ಲಿ ಗುಂಡಿನ ಮೂಲಕ ಸ್ವಾಗತಿಸಿದ್ದಾರೆ. ಇದಕ್ಕೆ ಖೂಬ ಅವರು ಕಾರಣ ಅಲ್ಲದೇ ಇರಬಹುದು. ಆದರೆ ಈ ರೀತಿಯ ವರ್ತನೆಗಳು ಕಾಣಿಸುತ್ತಿದ್ದಂತೆ, ಅದನ್ನು ಪ್ರಶ್ನಿಸ ಬೇಕು ಅಥವಾ ನಿಯಂತ್ರಿಸಹುದು. ಇನ್ನು ಕರೋನಾ ಮೂರನೇ ಅಲೆಯ ಆತಂಕದಲ್ಲಿದ್ದರೂ, ಎಲ್ಲ ಪಕ್ಷದ ನಾಯಕರು ಇದೀಗ ತಮ್ಮ ಪಕ್ಷದ ಹಲವು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.

ಈಗಲೂ ರಾಜಕೀಯ ಕಾರ್ಯಕ್ರಮಗಳಿಗೆ ನಿರ್ಬಂಧವಿದ್ದರೂ, ಅದನ್ನು ಕಿವಿಗೆ ಹಾಕಿಕೊಳ್ಳದೇ, ಸಾವಿರಾರು ಜನರನ್ನು ಸೇರಿಸಿಕೊಂಡು ರ‍್ಯಾಲಿ, ಸಮಾವೇಶ ವನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಜನಾರ್ಶೀವಾದ ಯಾತ್ರೆ ಹೆಸರಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೆ, ಕಾಂಗ್ರೆಸ್ ನಾಯಕರು ಪಕ್ಷ ಸಂಘಟನೆ ಹೆಸರಲ್ಲಿ ಸಾಲು ಸಾಲು ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.

ಈಗ ಮೂರನೇ ಅಲೆ ಆತಂಕವಿದ್ದರೂ, ಈ ಯಾವುದನ್ನು ತಲೆಕೆಡಿಸಿಕೊಳ್ಳದೇ, ತಮ್ಮ ಪಕ್ಷದ ಕಾರ್ಯಕ್ರಮ ಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಾರ್ವಜನಿಕರ ಕಾರ್ಯಕ್ರಮ, ಹಬ್ಬ, ಜಾತ್ರೆಗಳಿಗೆ ಕಠಿಣ ನಿಯಮವನ್ನು ಹೇರುವ ಸರಕಾರಗಳು, ರಾಜಕೀಯ ಕಾರ್ಯಕ್ರಮಗಳಲ್ಲಿ ಮಾರ್ಗಸೂಚಿ ಗಳನ್ನು ಸ್ಪಷ್ಟ ಉಲ್ಲಂಘನೆ ಮಾಡಿದ್ದರೂ, ಅದರ ಬಗ್ಗೆ ಯಾವುದೇ ಕ್ರಮವಹಿಸುವುದಿಲ್ಲ.

ಇನ್ನಾದರೂ, ರಾಜಕೀಯ ಪಕ್ಷಗಳು, ಮಾರ್ಗಸೂಚಿ, ಕಾನೂನುಗಳಿಗಿಂತ ಹೆಚ್ಚಾಗಿ, ಜನರಿಗೆ ಮಾದರಿಯಾಗುವಂತೆ ವರ್ತಿಸಬೇಕು ಎನ್ನುವ ಸ್ವಯಂ ಕಟ್ಟಳೆ ಹಾಕಿಕೊಳ್ಳುವುದು ಅನಿವಾರ್ಯ.