ಕೋವಿಡ್ ಸಂಕಷ್ಟದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಿದ್ದ 9 ರಿಂದ 12 ನೇ ತರಗತಿಗಳನ್ನು ಆ.23ರಿಂದ ಆರಂಭಿಸಲಾಗಿದೆ. ಹಲವೆಡೆ ವಿದ್ಯಾರ್ಥಿಗಳು ನಿರಾಸಕ್ತಿ ತೋರಿದ್ದರೂ ಶಿಕ್ಷಕರು, ಪೋಷಕರು, ಶಿಕ್ಷಣ ತಜ್ಞರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.
ಪ್ರಾಥಮಿಕ ಹಂತದಿಂದಲೇ ಶಾಲೆಗಳನ್ನು ಆರಂಭಿಸಲು ಡಾ.ದೇವಿಶೆಟ್ಟಿ ನೇತೃತ್ವದ ತಜ್ಞರ ಸಮಿತಿ ಕೂಡ ಈಗಾಗಲೇ ಸಲಹೆ ನೀಡಿದೆ. ಹೀಗಾಗಿ ಆರರಿಂದ ಎಂಟನೆಯ ತರಗತಿಗಳನ್ನೂ ಕೂಡಲೇ ಆರಂಭಿಸಬೇಕಿದೆ. ಕರೋನಾ ಪರಿಣಾಮದಿಂದ ದಿಕ್ಕು ತೋರದಂತಾಗಿದ್ದ ಹೆಚ್ಚಿನ ಮಕ್ಕಳು, ಶಿಕ್ಷಕರು ಮತ್ತು ಪಾಲಕರಿಗೆ 9-12ನೇ ತರಗತಿಗಳನ್ನು ಪ್ರಾರಂಭಿಸಿದ್ದರಿಂದ ದೊಡ್ಡ ನೆಮ್ಮದಿ ಉಂಟಾಗಿದೆ. ಶಾಲೆಗಳು ಆರಂಭಗೊಳ್ಳದೆ ಶಿಕ್ಷಕರು ಕೂಡ ಚಡಪಡಿಸುತ್ತಿದ್ದರು.
ಗ್ರಾಮೀಣ ಮಕ್ಕಳು ಕಳೆದ ಒಂದು ವರ್ಷದ ಮೇಲೆ ಶಿಕ್ಷಣದಿಂದ ವಂಚಿತರಾದಂತಾಗಿದೆ. ಕರೋನಾ ಆತಂಕ ಒಂದೆಡೆ ಆದರೆ, ಮನೆಯಲ್ಲೇ ಕುಳಿತ ಅಥವಾ ಪಾಲಕ ರೊಂದಿಗೆ ಅನ್ಯ ಚಟುವಟಿಕೆಗಳಲ್ಲಿ ಅನಿವಾರ್ಯವಾಗಿ ತೊಡಗಿಕೊಳ್ಳುವಂತಾದ ಮಕ್ಕಳ ಸಂಕಷ್ಟ ಇನ್ನೊಂದು ರೀತಿ ಶುರುವಾಗಿದೆ.
ಬೆಳೆಯಬೇಕಾದ ಮಕ್ಕಳ ದೈಹಿಕ ಮತ್ತು ಮಾನಸಿಕ ಸ್ಥಿತಿ ಹದಗೆಟ್ಟ ವರದಿಗಳು ಪ್ರಕಟವಾಗಿವೆ. ದೈಹಿಕ ಅಪೌಷ್ಟಿಕತೆ ಮತ್ತು ಮಾನಸಿಕ ಲವಲವಿಕೆ, ಆಟಪಾಠ ಇಲ್ಲದ ಮಕ್ಕಳು ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಆನ್ಲೈನ್ ಪಾಠ ಕೈಗೆಟುಕದ ಅನೇಕ ವಿದ್ಯಾರ್ಥಿಗಳು ತಂದೆ-ತಾಯಿಯ ಜತೆ ಕೂಲಿ ಕೆಲಸದಲ್ಲಿ ಪಾಲ್ಗೊಂಡಿರುವ ಬಗ್ಗೆಯೂ ಪತ್ರಿಕೆಗಳಲ್ಲಿ ವರದಿಗಳಾಗಿವೆ.
ಪಾಠ ಪ್ರವಚನಗಳಿಲ್ಲದೆ ಮತ್ತು ಸರಕಾರದ ಮೀನಮೇಷದ ನಡೆಯಿಂದ ಶಿಕ್ಷಕರು ಕೂಡ ನಿರುತ್ಸಾಹಗೊಂಡಿದ್ದಾರೆ. ಅಧ್ಯಯನ ನಿರಂತರವಾಗಿದ್ದರೆ ಮಾತ್ರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಸಾಧ್ಯ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡು ಆರರಿಂದ ಎಂಟನೆಯ ತರಗತಿಗಳನ್ನು ಕೂಡಲೇ ಆರಂಭಿಸಬೇಕು. ಕರೋನಾ ದೊಂದಿಗೆ ಹೋರಾಟ, ಎಚ್ಚರಿಕೆ ವಹಿಸುತ್ತಲೇ ಮಕ್ಕಳ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ಶೀಘ್ರ ಕ್ರಮ ಕೈಗೊಳ್ಳುವುದು ಸೂಕ್ತ.